ನವದೆಹಲಿ: ದಿನದಿಂದ ದಿನಕ್ಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಸೋಮವಾರ ಭಾರೀ ಜಿಗಿತ ಕಂಡು ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾದ ಬೆನ್ನಲ್ಲೇ ಶೇ.6ರಷ್ಟು ಜಿಗಿತ ಕಂಡ ಬೆಳ್ಳಿ ಕೆಜಿಗೆ 2,54,174 ರೂಪಾಯಿ ದಾಖಲಿಸಿತು. ಇದು ಈವರೆಗಿನ ಸಾರ್ವಕಾಲಿಕ ದಾಖಲೆ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಬೇಡಿಕೆ ಮತ್ತು ಜಾಗತಿಕ ಪ್ರವೃತ್ತಿಗಳು ಬೆಳ್ಳಿಯ ಈ ನಾಗಾಲೋಟಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ದೇಶಿಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಕೂಡ ಸಾರ್ವಕಾಲಿಕ ದರ ದಾಖಲಿಸಿದೆ. 357 ರೂಪಾಯಿ ಅಂದರೆ ಶೇ.0.26ರಷ್ಟು ಹೆಚ್ಚಳಗೊಂಡು 10 ಗ್ರಾಂ ಚಿನ್ನದ ಬೆಲೆ 1,40,230 ರೂಪಾಯಿ ತಲುಪಿದೆ.
ಕಾಮೆಕ್ಸ್‌ನಲ್ಲಿ ಬೆಳ್ಳಿ ಫ್ಯೂಚರ್‌ಗಳು ಇದೇ ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 80 ಡಾಲರ್ ಗಡಿ ದಾಟಿದೆ. ಮುಂದಿನ ವರ್ಷ ಅಮೆರಿಕ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಕಡಿತ ಮತ್ತು ಬಲವಾದ ಕೈಗಾರಿಕಾ ಬೇಡಿಕೆಯ ನಿರೀಕ್ಷೆಗಳಿಂದಾಗಿ 2026ರ ಮಾರ್ಚ್ ಸುಮಾರಿಗೆ ಪ್ರತಿ ಔನ್ಸ್‌ಗೆ 5.47 ಡಾಲರ್ ಅಥವಾ ಶೇ.7.09ರಷ್ಟು ಬೆಲೆ ಏರಿಕೆಯಾಗಿ 82.67 ಡಾಲರ್ ದಾಖಲೆಯ ಮಟ್ಟ ತಲುಪುವ ಸಾಧ್ಯತೆ ಇದೆ.
ಭಾರತದ ಷೇರು ಮಾರುಕಟ್ಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಲಾಭ ಗಳಿಸಿವೆ. ಏಷ್ಯನ್ ಮಾರುಕಟ್ಟೆಯಲ್ಲಿನ ದೃಢ ಪ್ರವೃತ್ತಿ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿಯನ್ನು ಅನುಸರಿಸಿ ಸೂಚ್ಯಂಕಗಳು ವೇಗ ಪಡೆದುಕೊಂಡವು. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 22.24 ಪಾಯಿಂಟ್ ಏರಿಕೆಯಾಗಿ 85,063.69 ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 16 ಪಾಯಿಂಟ್‌ಗಳ ಅಲ್ಪ ಲಾಭ ಗಳಿಸಿ 26,058.30 ತಲುಪಿದೆ.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ.1.04ರಷ್ಟು ಏರಿಕೆಯಾಗಿ 61.27 ಡಾಲರ್‌ಗೆ ಮಾರಾಟವಾಗುತ್ತಿದೆ.


