ಎಡೆಯೂರು ಸಿದ್ಧಲಿಂಗೇಶ್ವರ ಶ್ರೀಗಳು ಅಲ್ಲಮಪ್ರಭುವಿನ ವೈರಾಗ್ಯ, ಬಸವಣ್ಣನವರ ಭಕ್ತಿ, ಚೆನ್ನಬಸವಣ್ಣನ ಜ್ಞಾನದ ತ್ರಿವೇಣಿ ಸಂಗಮವೆಂದು ಗದಗದ ಡಾ.ತೋಂಟದ ಸಿದ್ಧಲಿಂಗಸ್ವಾಮಿಗಳು ಹೇಳುತ್ತಾರೆ. ಅಚಾರ್ಯ, ಅವಧೂತ, ಪವಾಡಪುರುಷರಾಗಿ ಮೇಲ್ವರ್ಗ ಕೆಳವರ್ಗವನ್ನು ಶರಣ ಚಳುವಳಿಯಲ್ಲಿ ಒಟ್ಟಾಗಿಸಿದ ಸಂತ ಇವರು.
ಸಿದ್ಧಲಿಂಗ ಯತಿಗಳ ಕಾಲ ನಿರ್ಣಯ, ಸ್ಥಳ ನಿರ್ಣಯದ ಬಗ್ಗೆ ಗೊಂದಲವಿದೆ. ಶಾಂತೇಶ ಕವಿಯ ಸಿದ್ಧೇಶ್ವರಪುರಾಣ, ಕವಿ ಪವಾಡನ ತೋಟದ ಸಿದ್ಧಲಿಂಗ ತಾರಾವಳಿ, ಸುವ್ವಿಮಲ್ಲನ ಸಿದ್ಧೇಶ್ವರ ಸಾಂಗತ್ಯ ಕೃತಿಗಳು, ಎಡೆಯೂರು ಮತ್ತು ಕಗ್ಗರೆ ಶಾಸನಗಳು ಸಿದ್ಧಲಿಂಗೇಶ್ವರ ಶಿವಯೋಗಿಗಳ ಜೀವನದ ಬಗ್ಗೆ ಬೆಳಕು ಚೆಲ್ಲುತ್ತವೆ.
ಶಾಂತೇಶ ಕವಿಯು ನಾರದನ ಕೋರಿಕೆಯಂತೆ ಶಿವನೆ ೮ ವರ್ಷದ ಮಗುವಾಗಿ ಸಿದ್ಧಲಿಂಗೇಶ್ವರನಾಗಿ ಜನಿಸಿದನೆಂದು ತಿಳಿಸಿದರೆ, ಹೇರಂಭನೆಂಬ ಬ್ರಾಹ್ಮಣ ಕವಿ ಹರದನಹಳ್ಳಿಯ ಸಂತಾನಹೀನ ದಂಪತಿ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆಗೆ ಗೋಸಲ ಚೆನ್ನಬಸವೇಶ್ವರ ವರದಿಂದ ದೊರೆತ ಮಗು ಎನ್ನುತ್ತಾರೆ. ಸದಾಕಾಲ ಶಿವಧ್ಯಾನದಲ್ಲಿದ್ದ ಸಿದ್ಧಲಿಂಗನನ್ನು ಚೆನ್ನಬಸವೇಶ್ವರರಿಗೆ ದಂಪತಿ ಒಪ್ಪಿಸಿದಾಗ ಶಿವದೀಕ್ಷೆ ನೀಡಿ ಮಠದಲ್ಲಿರಿಸಿಕೊಂಡರು. ನೀರಿನಲ್ಲಿ ದೀಪ ಬೆಳಗಿಸಿದ ಬಾಲಕ ಸಿದ್ಧಲಿಂಗನ ಪವಾಡಗಳನ್ನು ನೋಡಿ ಗೋಸಲರು ಗುರು ಪಟ್ಟವನಿತ್ತು ಶಿವಸಾಯುಜ್ಯ ಹೊಂದಿದರು.
ವಚನ ಸಾಹಿತ್ಯಕ್ಕೆ ಕೊಡುಗೆ
ಮಹಾಲಿಂಗ ಗುರು ಶಿವ ಸಿದ್ಧೇಶ್ವರಪ್ರಭು ಅಂಕಿತನಾಮದಲ್ಲಿ ಸಿದ್ಧಲಿಂಗ ಶಿವಯೋಗಿಗಳು ರಚಿಸಿರುವ ಷಟ್‌ಸ್ಥಲ ಜ್ಞಾನಸಾರಾಮೃತ ಕೃತಿಯಲ್ಲಿ ೭೦೧ ವಚನ ಗಳಿವೆ. ವೀರಶೈವರು ಆಚರಿಸಬೇಕಾದ ಷಟ್‌ಸ್ಥಲ ಸಿದ್ಧಾಂತ ಹಾಗೂ ಅಷ್ಟಾವರಣಗಳ ಬಗ್ಗೆ ಶಾಸ್ತ್ರೀಯವಾಗಿ ನಿರೂಪಿಸಿ, ೧೬ನೆಯ ಶತಮಾನದ ವೈಚಾರಿಕ ವಚನ ಪರಂಪರೆ ಮತ್ತು ಬಸವೋತ್ತರ ಯುಗದ ಸಾಮಾಜಿಕ ಸುಧಾರಣ ಚಳುವಳಿಯ ಅಧ್ವರ್ಯರಾದರು. ವಚನಗಳನ್ನು ರಚಿಸಿ, ಅವುಗಳನ್ನು ರಕ್ಷಿಸಿ ಮತ್ತು ವ್ಯಾಖ್ಯಾನಿಸುವಂತಹ ಕೆಲಸ ಮಾಡಿದರು.
ದಕ್ಷಿಣ ಕರ್ನಾಟಕದಲ್ಲಿ ಅನುಭವಮಂಟಪದ ಚಳುವಳಿಯನ್ನು ಮರುಸ್ಥಾಪಿಸಿದ ಸಿದ್ಧಲಿಂಗ ಶಿವಯೋಗಿಗಳ ಸಾವಿರಾರು ಶಿಷ್ಯ ಪ್ರಶಿಷ್ಯರಿಂದ ಆಗಿರುವ ಸಾಧನೆ ಗಳನ್ನು ಸಾಹಿತ್ಯ ಪರಂಪರೆ, ಶಾಸ್ತ್ರ ಪರಂಪರೆ, ಗುರು ಪರಂಪರೆ, ಆಧ್ಯಾತ್ಮ ಪರಂಪರೆ ಮತ್ತು ವೀರಶೈವ ಪರಂಪರೆ ಮತ್ತು ಮಠ ಪರಂಪರೆ ಹೀಗೆ ಅನೇಕ ಸಾಂಸ್ಕೃತಿಕ ಆಯಾಮಗಳ ಮೂಲಕ ೨೦ ಮತ್ತು ೨೧ನೆಯ ಶತಮಾನದ ವಿಮರ್ಶಕ ವಿದ್ವಾಂಸರು ಗುರ್ತಿಸಿದ್ದಾರೆ.
ಬಸವಣ್ಣನವರ ನಂತರ ಜನರ ಗುರುವಾಗಿ ಸಾಹಿತ್ಯ, ಕಾವ್ಯ ಪುರಾಣ ಮತ್ತು ವಚನ ಸಾಹಿತ್ಯ, ಶಾಸನಗಳಲ್ಲಿ ಹೆಚ್ಚು ಬಾರಿ ಉಲ್ಲೇಖನಗೊಂಡಿದ್ದಾರೆ. ಅವರ ಶಿಷ್ಯರಾದ ಶಾಂತೇಶ, ವಿರಕ್ತ ತೋಟದಾರ್ಯ ಮತ್ತು ಸುವ್ವಿಮಲ್ಲ ವಿರೂಪಾಕ್ಷ ಪಂಡಿತ, ಸಿದ್ಧ ನಂಜೇಶ, ಚೆನ್ನವೀರ ಜಂಗಮ, ಯತಿ ಬಸವಲಿಂಗ, ಹೇರಂಭ ಮೊದಲಾದವರು ಸಿದ್ಧಲಿಂಗೇಶ್ವರರ ಬಗ್ಗೆ ಅಗಾದ ಮಾಹಿತಿ ನೀಡುತ್ತಾರೆ. ಮಸ್ಲಿಂ ರಾಜರುಗಳ ಆಳ್ವಿಕೆಯ ಕಾಲದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯೋಗಿಗಳ ಕೆಲಸ ಅಮರವಾದುದು.
ಸಿದ್ಧಲಿಂಗ ಶಿವಯೋಗಿಗಳನ್ನು ಒಕ್ಕಲಿಗರ ನಂಬಿಯಣ್ಣ ಮತ್ತು ಚೆನ್ನಮ್ಮ ದಂಪತಿ ಮನೆಗೆ ಬರಲು ಬಿನ್ನವಿಸಿಕೊಂಡು ಕಗ್ಗೆರೆಗೆ ಕರೆತರುವಾಗ ಹುತ್ರಿದುರ್ಗದ ಪಾಳೇಗಾರನ ದಾಳಿಯಿಂದಾಗಿ ಜನೆರೆಲ್ಲಾ ವಲಸೆ ಹೋದರು. ಆದರೆ ಸ್ವಾಮಿಗಳು ನಂಬಿಯಣ್ಣನಿಗೆ ನೀನು ಬರುವವರೆಗೂ ಇಲ್ಲೆ ಇರುತ್ತೇನೆಂದು ತೋಟದ ಮಾವಿನ ಮರದ ಬಳಿ ಶಿವಯೋಗದಿಂದ ೬ ತಿಂಗಳು ತಪಸ್ಸು ಮಾಡುವಾಗ ಅವರ ಮೇಲೆ ಹುತ್ತ ಬೆಳೆಯಿತು. ಗುಳೆ ಹೋದ ನಂಬಿಯಣ್ಣ ಊರಿಗೆ ಹಿಂತಿರುಗಿ ದಾಗ ಈ ವಿಚಾರ ಮರೆತು ಹೋಗಿತ್ತು, ಇದನ್ನು ಅವನು ಸಾಕಿದ ಹಸು ಕಪಿಲೆ ಹುತ್ತದ ಬಳಿ ವಿಚಿತ್ರವಾಗಿ ಜ್ಞಾಪಿಸಿತು. ನಂತರ ಬಸವೇಂದ್ರ ಮಲ್ಲರಸಯ್ಯ ಪಟ್ಟಣಸ್ವಾಮಿ ಮೊದಲಾದವರು ಹುತ್ತದಿಂದ ಹೊರತಂದು ಪಲ್ಲಕ್ಕಿ ಮೇಲೆ ಕರೆತಂದರು. ಕಗ್ಗರೆಯ ತೋಟದಲ್ಲಿ ದೀರ್ಘ ತಪಸ್ಸನ್ನಾಚರಿಸಿದ್ದರಿಂದ ತೋಂಟದ ಸಿದ್ಧಲಿಂಗನೆಂಬ ಹೆಸರು ಬಂತು.
ಗುರುವಿನ ಆದೇಶದಂತೆ ೭೦೦ ವಿರಕ್ತರು, ೩೦೦ ಜಂಗಮರೊಂದಿಗೆ ಅಖಂಡ ಭಾರತ ಪ್ರವಾಸ ಮಾಡಿ ಭರತಖಂಡವನ್ನು ಪುನೀತಗೊಳಿಸಿದ ಪರಿವ್ರಾಜಕ. ಬಿಜ್ಜಾವರದ ರಾಜ ಭೂಪಾಲಕನು ಇವರ ಪಾದಪೂಜೆ ಮಾಡಿ ಪುನೀತನಾದ. ಕಗ್ಗರೆಯಿಂದ ನಾಗಿಣಿ ನದಿಯ ಎಡೆಯೂರಿಗೆ ಆಗಮಿಸಿದಾಗ ಸಿದ್ಧಲಿಂಗ ಶಿವಯೋಗಿ ಗಳ ಶಿಷ್ಯ ಚಿಟ್ಟಿಗದೇವರ ಶಿಷ್ಯನಾದ ದಾನಿವಾಸ ಹಳ್ಳಿಯ ಚೆನ್ನವೀರಪ್ಪ ಒಡೆಯರ್ ಕಟ್ಟಿಸಿದ ಕಲ್ಲುಮಠದಲ್ಲಿ ಷಟ್‌ಸ್ಥಲದ ಬಗ್ಗೆ ಬೋಧಿಸಿ ಕೊನೆಗೆ ಶಿಷ್ಯ ಬೋಳ ಬಸವರಾಜರಿಗೆ ನಿರಂಜನ ಪಟ್ಟಾಧಿಕಾರವನ್ನು ವಹಿಸಿ ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರು. ಅಲ್ಲಿ ಕಲ್ಲುಕುಟಿಗ ಹಂಪಯ್ಯನು ದೇವಾಲಯ ನಿರ್ಮಿಸಿದನೆಂದು ದೇವಸ್ಥಾನದಲ್ಲಿರುವ ಶಾಸನ ವಿವರಿಸುತ್ತದೆ. ಗೋಡೆಗಳಲ್ಲಿ ಯತಿಗಳ ಜೀವನದ ಪವಾಡಗಳನ್ನು ಕೆತ್ತಲಾಗಿದೆ. ಸಿದ್ಧಲಿಂಗೇಶ್ವರರು ಗದಗ ಡಂಬಳ ಎಡೆಯೂರು ಮುಂತಾದ ಕಡೆ ಶೂನ್ಯಪೀಠಗಳನ್ನು ಸ್ಥಾಪಿಸಿದರು. ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಆಳರಸರ ಮನಗೆದ್ದಿದ್ದರು.
ಬೋಳಬಸವರಾಜರಿಗೆ ನಿರಂಜನ ಪೀಠಾಧಿಕಾರವನ್ನು ವಹಿಸಿ ಚೈತ್ರಶುದ್ಧ ಸಪ್ತಮಿಯ ಅಭಿಜನ್ ಮಹೂರ್ತದಲ್ಲಿ ಜೀವಕೋಟಿಗೆ ಶುಭಾಶೀರ್ವಾದ ನೀಡಿ ನಿರ್ವಿಕಲ್ಪ ಶಿವಯೋಗವಾಗಿ ಇಂದಿಗೆ ೫೫೫ ವರ್ಷಗಳಾಗಿವೆ. ನಿರ್ವಿಕಲ್ಪವಾದ ದಿನ ಮತ್ತು ಸಮಯವನ್ನು ಅನುಸರಿಸಿ ಯುಗಾದಿಯಂದು ಮಹಾರಥಕ್ಕೆ ಕಳಸಾರೋಹಣ ನಡೆದು ಸಿದ್ದಲಿಂಗೇಶ್ವರ ಸ್ವಾಮಿಯವರ ಉತ್ಸವಗಳು ಪ್ರಾರಂಭವಾಗುತ್ತವೆ. ೭ನೆಯ ದಿನ ಮಹಾ ರಥೋತ್ಸವ, ಮುತ್ತಿನ ಪಲ್ಲಕಿ ಉತ್ಸವ, ಬಿಲ್ವವೃಕ್ಷ ವಾಹನೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ದೊಂದಿಗೆ ರಾತ್ರಿಯಿಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಎಡೆಯೂರು ಭೂಕೈಲಾಸವಾಗಿ ವಿಜೃಂಭಿಸುತ್ತದೆ. ಇಲ್ಲಿಗೆ ಬರುವ ಭಕ್ತರಿಗೆ ಗದಗಿನ ಡಂಬಳ ಮಠದ ತೋಟದಾರ್ಯ ಮಠದವರು ನಿತ್ಯಾನ್ನ ದಾಸೋಹ ಮಾಡಿಕೊಂಡು ಬಂದಿದ್ದಾರೆ.
-ಬ್ಯಾ. ರಾ. ಪ್ರಸನ್ನಕುಮಾರ್
ಬ್ಯಾಡರಹಳ್ಳಿ, ಕೃಷ್ಣರಾಜನಗರ ತಾಲೂಕು, ಮೈಸೂರು
ಫೋನು: ೯೨೦೬೩೭೬೮೮೯