Menu

“ಹಿಂದುಳಿದ ವರ್ಗಗಳ ನಾಯಕನೆಂದು  ಹೇಳುತ್ತ ತಿರುಗುವ ಸಿದ್ದರಾಮಯ್ಯರಿಂದ ನಿಗಮಗಳ ಅನುದಾನಗಳಿಗೆ ಕತ್ತರಿ”

ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ಜಾತಿಗಳ ನಿಗಮಗಳಿಗೆ ಅನುದಾನ ಕಡಿತ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆಯ ಸಮಯದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತ ಮುಖಂಡರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ  ಕಿಡಿ ಕಾರಿದ್ದಾರೆ.

ದಾವಣಗೆರೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಅವಧಿಯಲ್ಲಿ ಅಂಬೇಡ್ಕರ್ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ 100 ಕೋಟಿ ನೀಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ 45 ಕೋಟಿ ನೀಡಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 110 ಕೋಟಿ ನೀಡಿದ್ದರೆ, ಸಮುದಾಯಗಳ ಚಾಂಪಿಯನ್ ಸಿದ್ದರಾಮಯ್ಯ 60 ಕೋಟಿ ನೀಡಿದ್ದಾರೆ. ಭೋವಿ ನಿಗಮಕ್ಕೆ ಬಿಜೆಪಿ 95 ಕೋಟಿ ನೀಡಿದರೆ, ಸಿದ್ದರಾಮಯ್ಯ 45 ಕೋಟಿ ನೀಡಿದ್ದಾರೆ. ದೇವರಾಜು ಅರಸು ನಿಗಮಕ್ಕೆ ಬಿಜೆಪಿ 190 ಕೋಟಿ ನೀಡಿದರೆ, ಕಾಂಗ್ರೆಸ್ 100 ಕೋಟಿ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಹೆಸರಿನ ನಿಗಮಕ್ಕೆ  50 ಕೋಟಿ ನೀಡಿದ್ದಾರೆ. ಆದರೆ ಬಿಜೆಪಿ 106 ಕೋಟಿ ನೀಡಿತ್ತು. ನೇಕಾರರಿಗೆ ಬಿಜೆಪಿ 125 ಕೋಟಿ ನೀಡಿದರೆ, ಕಾಂಗ್ರೆಸ್ 10 ಕೋಟಿ ನೀಡಿದೆ. ಒಟ್ಟಾರೆಯಾಗಿ ಬಿಜೆಪಿ ಹಿಂದುಳಿದ ವರ್ಗಗಳಿಗೆ 1643 ಕೋಟಿ ನೀಡಿದರೆ, ಸಿದ್ದರಾಮಯ್ಯ 1000 ಕೋಟಿ ನೀಡಿದ್ದಾರೆ. 1055 ಕೋಟಿ ನುಂಗಿದ್ದಾರೆ. ಆದರೂ ದಲಿತರು, ಹಿಂದುಳಿದ ವರ್ಗಗಳ ಸಭೆ ನಡೆಸಿ ಮತ ಯಾಚಿಸುತ್ತಿದ್ದಾರೆ. ಈಗ ಸಿದ್ದರಾಮಯ್ಯನವರ ಸೀಟು‌ ಗ್ಯಾರಂಟಿ ಇಲ್ಲ. ಡಾ.ಜಿ.ಪರಮೇಶ್ವರ ದಲಿತರ ‌ಕಾಲೋನಿಗೆ ಹೋಗಿ ನನ್ನ ಸಿಎಂ ಮಾಡುತ್ತಾರೆ ಎನ್ನುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಹಾಗೂ ಮೂರು ವರ್ಷದಲ್ಲಿ ಮೂವತ್ತು ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಗುತ್ತಿಗೆದಾರರು ಮಾಡಿರುವ 60% ಕಮಿಶನ್ ಆರೋಪ, ಲಿಕ್ಕರ್ ಲಾಬಿ ಮಾಡಿ ಸಚಿವರು ಕೋಟಿಗಟ್ಟಲೆ ಹಣವನ್ನು ದೆಹಲಿಗೆ ಕಳಿಸಿರುವುದು ಸೇರಿದಂತೆ ಮೊದಲಾದ ಹಗರಣ ನಡೆದಿವೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ನಿರ್ಮಿಸಲಾಗಿತ್ತು. ಈಗ ಮೆಡಿಕಲ್ ಕಾಲೇಜು ಅಲ್ಲ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನೇ ವರ್ಗಾಯಿಸಲಾಗಿದೆ. ಔಷಧಿ ಪೂರೈಕೆಗೆ ಟೆಂಡರ್ ಕರೆದಿಲ್ಲ. ಕೃಷ್ಣೆಯ ಕಣ್ಣೀರು ಒರೆಸುತ್ತೇನೆಂದು ಹೇಳಿ ಯಾವುದೇ ನೀರಾವರಿ ಯೋಜನೆಗೂ ಹಣ ನೀಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಬಾದಾಮಿಗೆ ಬಂದು ಬಿರಿಯಾನಿ ತಿಂದು ಚುನಾವಣೆ ಎದುರಿಸಿದರು. ಇವರ ತವರು ಮೈಸೂರಿನ ಅಭಿವೃದ್ಧಿ ಮಾಡದೆ 30 ಸಾವಿರ ಮತಗಳಿಂದ ಸೋತರು. ಆಗ ಬಾದಾಮಿ ಇವರ ಕೈ ಹಿಡಿಯಿತು. ಅಂತಹ ಬಾದಾಮಿಗೆ ಕೈ ಕೊಟ್ಟು ಓಡಿಹೋದರು. ಈಗ ಮತ್ತೆ ಬಾಗಲಕೋಟೆಗೆ ಬಂದು ಪ್ರಚಾರ ಮಾಡಿ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಎನ್ನುತ್ತಿದ್ದಾರೆ. ಇಷ್ಟು ವರ್ಷ ಕಾಂಗ್ರೆಸ್ ಶಾಸಕರೇ ಇದ್ದರೂ ಅಭಿವೃದ್ಧಿ ಮಾಡಿಲ್ಲ.‌ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ 700 ಕೋಟಿ ರೂ. ಅನುದಾನ ನೀರಾವರಿಗೆ ಕೊಟ್ಟಿದ್ದರು‌. ಮಾಜಿ ಶಾಸಕ ವೀರಣ್ಣ ಚರಂತಿಮಠ ಕೂಡ ಸುಧಾರಣೆ ಮಾಡಿದ್ದಾರೆ. ಆದರೆ ಸರ್ಕಾರದಲ್ಲಿ ಹಣವಿಲ್ಲದೆ ಈಗ ಅಭಿವೃದ್ಧಿ ಆಗುತ್ತಿಲ್ಲ ಎಂದರು.

2022-23 ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ 47,000 ಕೋಟಿ ರೂ. ಸಾಲ ಮಾಡಿ, 84,000 ಕೋಟಿ ರೂ. ಅಭಿವೃದ್ಧಿಗೆ ಮೀಸಲಿಟ್ಟರು. ಆದರೆ ಸಿದ್ದರಾಮಯ್ಯ 1.32 ಲಕ್ಷ ರೂ. ಸಾಲ ಮಾಡಿ, 82,000 ಕೋಟಿ ರೂ. ಅಭಿವೃದ್ಧಿಗೆ ಇಟ್ಟಿದ್ದಾರೆ. ಇವರು ಸಾಲ ಮಾಡಿ, ಮಜಾವಾದಿರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅನ್ನ ಕೊಟ್ಟರೆ, ಸಿದ್ದರಾಮಯ್ಯ ಚೀಲ ಕೊಟ್ಟು ಹೆಸರು ಮಾಡುತ್ತಿದ್ದಾರೆ. ಗೃಹಲಕ್ಷ್ಮಿಯ 5,000 ಕೋಟಿ ಹಣವನ್ನು ಎರಡು ತಿಂಗಳಲ್ಲಿ ನೀಡಿಲ್ಲ. ಆ ಹಣ ಎಲ್ಲಿ ಹೋಯಿತು ಎಂದು ಸದನದಲ್ಲಿ ಪ್ರಶ್ನಿಸಿದಾಗ ಉತ್ತರ ನೀಡಿಲ್ಲ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪ ಕಿಸಾನ್ ಸಮ್ಮಾನ್ ಗೆ 4,000 ನೀಡಿದ್ದರು. ಈ ಯೋಜನೆಗಳನ್ನು ಸಿದ್ದರಾಮಯ್ಯ ರದ್ದು ಮಾಡಿದ್ದರು. ಕೋವಿಡ್ ಸಮಯದಲ್ಲಿ ನಯಾ ಪೈಸೆ ಆದಾಯ ಇಲ್ಲದಾಗ ಅಭಿವೃದ್ಧಿ ಮಾಡಿದ್ದೇವೆ. ಆದರೆ ಈಗ ಕಾಂಗ್ರೆಸ್ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ. ಬದಲಾಗಿ ವಯನಾಡಿಗೆ 25 ಕೋಟಿ ಪರಿಹಾರ ನೀಡಿದ್ದಾರೆ. ಸಾರಿಗೆ, ಅನ್ನಭಾಗ್ಯ, ಗುತ್ತಿಗೆದಾರರ ಬಾಕಿ ಸೇರಿ 75,000 ಕೋಟಿ ಬಾಕಿ ಉಳಿದಿದೆ. ಸಿದ್ದರಾಮಯ್ಯ ಎಂದರೆ ಕೇವಲ ಪೇಪರ್ ರಾಮಯ್ಯ ಎಂದರು.

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗ್ಯಾರಂಟಿಗಳಿಂದ ಅಭಿವೃದ್ಧಿ ನಡೆದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.‌ ಇಷ್ಟಾದರೂ ಗ್ಯಾರಂಟಿಯಿಂದ ವಾಶಿಂಗ್ ಮಶಿನ್ ಖರೀದಿ, ಫ್ರಿಜ್ ಖರೀದಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದು ಬಾರಿಯೂ ಜಿಎಸ್ ಟಿ ಸಭೆಗೆ ಹೋಗದೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿ ಎನ್ನುತ್ತಾರೆ. ಯುಪಿಎಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ನಾಲ್ಕು ಪಟ್ಟು ಅಧಿಕ ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಪ್ರತಿ ಬಾರಿ ಸಂವಿಧಾನದ ಪುಸ್ತಕ ಹಿಡಿದು ಅಂಬೇಡ್ಕರ್ ಹೆಸರು ಹೇಳುತ್ತಾರೆ. ಆದರೆ 53,000 ಕೋಟಿ ರೂ. ಎಸ್ ಸಿಎಸ್ಪಿ ಟಿಎಸ್ಪಿ ಅನುದಾನವನ್ನು ವರ್ಗಾವಣೆ ಮಾಡಿದ್ದಾರೆ. ಕಾನೂನು ಪ್ರಕಾರ ಈ ಹಣ ದಲಿತರ ಪ್ರಗತಿಗೆ ಮಾತ್ರ ಬಳಕೆಯಾಗಲಿ.  ಆದರೆ ಅರಣ್ಯ ಇಲಾಖೆಗೆ, ಆನೆ ಓಡಿಸಲು ಈ ಹಣ ಬಳಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಮಂತ್ಲಿ ಪೇಮೆಂಟ್ ಮಾತ್ರ ನಿಯತ್ತಾಗಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿ ಮುಗಿದಾಗ ಒಬ್ಬರ ಮೇಲೆ ತಲಾ 13,000 ರೂ. ಸಾಲವಿತ್ತು. ಈಗ ಅದು 1.20 ಲಕ್ಷ ರೂ. ಆಗಿದೆ. ಪ್ರತಿ ವರ್ಷ 82,000 ಕೋಟಿ, ತಿಂಗಳಿಗೆ 6,833 ಕೋಟಿ, ದಿನಕ್ಕೆ 277 ಕೋಟಿ, ಗಂಟೆಗೆ 9.5 ಕೋಟಿ ರೂ. ಸಾಲವಾಗುತ್ತಿದೆ. ಮೂರು ವರ್ಷ ಏನು ಮಾಡಿದ್ದಾರೆ ಎಂಬ ಪ್ರಗತಿ ಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಂಜೋಳ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *