ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಲು ಬಂದರೆ ಸುಟ್ಟು ಹೋಗ್ತಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬುಧವಾರ ಸಿಎಂ ಸ್ಥಾನದ ಕುರಿತು ಪಕ್ಷದ ಮುಖಂಡರ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ ಸ್ಥಾನ ಯಾರೂ ಕಿತ್ತುಕೊಳ್ಳೋಕೆ ಆಗಲ್ಲ. ಅವರು ಒಂಥರಾ ಬೆಂಕಿ ಇದ್ದಂತೆ ಮುಟ್ಟಿದರೆ ಏನಾಗುತ್ತಾ ಸುಟ್ಟು ಹೋಗ್ತಾರೆ ಅಷ್ಟೆ ಎಂದರು.
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇದ್ದಾರೆ. ಖಾಲಿ ಇದ್ದರೆ ತಾನೇ ಆಯ್ಕೆ ಬಗ್ಗೆ ಚರ್ಚೆ. ನಾವು ನಮ್ಮ ಅಭಿಪ್ರಾಯ ಹೇಳಬಹುದು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಅದಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದವರು ಯಾರೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿ ಎಂದು ಹೇಳಿಲ್ಲ. ಎಲ್ಲರಿಗೂ ಸಿಎಂ ಆಗುವ ಹಂಬಲ ಇರುತ್ತದೆ. ಅವರು ಅವರ ಸಮುದಾಯದಿಂದ ಸಿಎಂ ಆಗಲು ಬಯಸುತ್ತಾರೆ. ದಲಿತ, ಅಲ್ಪಸಂಖ್ಯಾತ, ಎಸ್ಟಿ, ಲಿಂಗಾಯತ ಸಮುದಾಯ ಎಲ್ಲರೂ ಸಿಎಂ ಆಗಬೇಕು ಅಂತಾರೆ. ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.