ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಸ್ಥಾಪನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಎಂದರೇ ಸ್ವಾವಲಂಬನೆಯ ಪ್ರತೀಕ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಕೋಟ್ಯಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗದ ಕಾರಣ ಅವರಿಗೆ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ ಎಂಬ ಮಹತ್ತರ ಹೇಳಿಕೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಜಾರಿಗೊಳಿಸಿತು.
ಆ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಮಹಿಳಾ ದಸರಾ ಉಪ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.