Menu

ದಾವಣಗೆರೆಯ ಸರ್ವತೋಮುಖ ಬೆಳವಣಿಗೆಗೆ ಶ್ಯಾಮನೂರು ಶಿವಶಂಕರಪ್ಪ ಕಾರಣ: ಸದನದಲ್ಲಿ ಸಂತಾಪ ಸಲ್ಲಿಸಿದ ಸಿಎಂ

ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ  ವಿಧಾನಸಭೆಯಲ್ಲಿ  ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಅವರು ಮಾತನಾಡಿದರು.

ಶ್ಯಾಮನೂರು ಶಿವಶಂಕರಪ್ಪ ಅವರು ತಮ್ಮ 63 ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ ಕಾಲಾ ರಾಜಕೀಯದಲ್ಲಿದ್ದರು . ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.

ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಖಾಶಿಯಾಗಿಸಿದರು. ಉದ್ಯಮಿಯಾಗಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಜವಳಿ ಕ್ಷೇತ್ರದ ಅವನತಿ ಪ್ರಾರಂಭವಾದಾಗ ದಾವಣಗೆರೆಗೆ ಒಂದು ಬ್ರಾಂಡ್ ಹೆಸರನ್ನು ಶ್ಯಾಮನೂರರು ತಂದುಕೊಟ್ಟರು. ದೀರ್ಘಕಾಲ ಎಐಸಿಸಿ ಖಜಾಂಚಿ ಆಗಿದ್ದರು. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದವರು ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.

ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲ ಅವರ ಗೆಸ್ಟ್ ಹೌಸ್ ನಲ್ಲಿ ಉಳಿಯುತ್ತಿದ್ದು, ಅವರ ಒತ್ತಾಯದ ಮೇರೆಗೆ ಅವರ ಮನೆಯಲ್ಲಿಯೇ ಊಟ ಮಾಡುತ್ತಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ತಮ್ಮ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿಯೇ ಆಚರಿಸಿಕೊಂಡಿದ್ದನ್ನು ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಶ್ಯಾಮನೂರು ಶಿವಶಂಕರಪ್ಪ ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಆರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದರು. ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಮಂತ್ರಿ ಮಂಡಲದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು 2016ರಲ್ಲಿ ಸಂಪುಟ ಪುನರ್ ರಚನೆಯಾದಾಗ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಸಚಿವರನ್ನಾಗಿ ಮಾಡಲು ಕೋರಿಕೊಂಡಿದ್ದರು. ಮಲ್ಲಿಕಾರ್ಜುನ್ ಅವರು ನಮ್ಮ ಈಗಿನ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದು ಭಗವಂತ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಸಂತಾಪದಲ್ಲಿ ತಿಳಿಸಿದರು.

Related Posts

Leave a Reply

Your email address will not be published. Required fields are marked *