ಶುಭಾಂಶು ಶುಕ್ಲಾ ಅವರನ್ನೊಳಗೊಂಡ ಆ್ಯಕ್ಸಿಯೋಂ ನೌಕೆ ಮಧ್ಯಾಹ್ನ 12.01ಕ್ಕೆ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಆರಂಭಿಸಿದೆ. ಶುಭಾಂಶು ಶುಕ್ಲಾ 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ. ತಾಂತ್ರಿಕ ಮತ್ತು ಹವಾಮಾನ್ಯ ವೈಪರೀತ್ಯದ ಕಾರಣ ನೌಕೆ ಉಡ್ಡಯನ ಹಲವು ಬಾರಿ ಮುಂದೂಡಿಕೆಯಾಗಿ ಇಂದು ಪ್ರಯಾಣಿಸಿದೆ.
ಶುಭಾಂಶು ಶುಕ್ಲಾ ಸೇರಿದಂತೆ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲವೋಝ್ ಉಝ್‌ನಾಸ್ಕಿ, ಹಂಗರಿಯ ಟಿಬರ್ ಕಪು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸೆಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿ ಐಎಸ್‌ಎಸ್‌ಗೆ ಈ ನಾಲ್ವರು ತೆರಳಿದ್ದಾರೆ. ನೌಕೆ ಗುರುವಾರ ಸಂಜೆ 4.30ರವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದೆ ಎಂದು ನಾಸಾ ತಿಳಿಸಿದೆ.
ಇವರೆಲ್ಲ 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿರಲಿದ್ದು, 60 ರೀತಿಯ ಪ್ರಯೋಗಗಳನ್ನು ನಡೆಸಲಿದ್ದಾರೆ. 60ರಲ್ಲಿ 7 ಪ್ರಯೋಗಗಳನ್ನು ಶುಭಾಂಶು ಶುಕ್ಲಾ ಮಾಡಲಿದ್ದಾರೆ. ಪ್ರಯಾಣದ ವೇಳೆ ಶುಭಾಂಶು ಶುಕ್ಲಾ ತಮ್ಮ ಜೊತೆಯಲ್ಲಿ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
1984ರಲ್ಲಿ ಭಾರತದ ರಾಕೇಶ್ ಶರ್ಮಾ ರಷ್ಯಾದ ಸೂಯೆಜ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 500 ಕೋಟಿ ರೂ. ಖರ್ಚು ಮಾಡಲಾಗಿದೆ.