ಭಾರತ 30 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕಾದರೆ ಭಾರತೀಯರು ಕಠಿಣ ಶ್ರಮ ವಹಿಸಬೇಕು. ಇದಕ್ಕಾಗಿ ಅವರು ವಾರದಲ್ಲಿ ಕನಿಷ್ಠ 80 ಗಂಟೆ ದುಡಿಯಬೇಕು ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರ್ಪಾ ಅಮಿತಾಬ್ ಕಾಂತ್ ಹೇಳಿದ್ದಾರೆ.
ಬ್ಯುಸಿನೆಸ್ ಸ್ಟಾಂಡರ್ಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದ ಸಮತೋಲನ ಕಾಯ್ದುಕೊಳ್ಳುವ ಬದಲು ಕನಿಷ್ಠ 80 ಗಂಟೆ ದುಡಿಯುವತ್ತ ಗಮನ ಹರಿಸಬೇಕು. ಇತ್ತೀಚೆಗೆ ಕಠಿಣ ಶ್ರಮ ವಹಿಸದೇ ಇರುವುದು ಅಥವಾ ಹೆಚ್ಚು ಅವಧಿ ಕೆಲಸ ಮಾಡದೇ ಇರುವ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ನಾನು ಕಠಿಣ ಶ್ರಮದ ಮೇಲೆ ನಂಬಿಕೆ ಹೊಂದಿದ್ಧೇನೆ ಎಂದು ಹೇಳಿದರು.
ಹೆಚ್ಚು ಸಮಯ ದುಡಿಮೆಯಲ್ಲ ತೊಡಗಿಸಿಕೊಳ್ಳಬೇಕು. ಅದು 80 ಗಂಟೆಯಾಗಿರಲಿ, 90ಗಂಟೆಯಾಗಿರಲಿ, ನಾವು 40 ಟ್ರೆಲಿಯನ್ ಅಥವಾ 30 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕಾದರೆ ಕಠಿಣ ಶ್ರಮ ವಹಿಸಬೇಕು. ಮನರಂಜನೆ ಅಥವಾ ಯಾವುದೋ ಸಿನಿಮಾ ನಟರಿಂದ ಇದು ಸಾಧ್ಯವಿಲ್ಲ ಎಂದು ವಿವರಿಸಿದರು. ಗುಣಮಟ್ಟ ಕಾಯ್ದುಕೊಳ್ಳುವ ಜೊತೆ ಉತ್ಪನ್ನಗಳನ್ನು ನಿಗದಿತ ಗಡುವಿನೊಳಗೆ ತಲುಪಿಸುವ ಕಾರ್ಯಕ್ಷಮತೆ ಬೆಳೆಸಿಕೊಳ್ಳಬೇಕಿದೆ ಎಂದರು.
ಇನ್ಫೋಸಿಸ್ ನಾರಾಯಣ ಮೂರ್ತಿ ವಾರದಲ್ಲಿ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಯಿಂದ ಶುರುವಾದ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಕೊನೆಗೆ ಇದು ಆಯ್ಕೆ ಅಷ್ಟೆ. ಒತ್ತಡವಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಎಲ್ ಅಂಡ್ ಟೀ ಸಂಸ್ಥೆ ಮುಖ್ಯಸ್ಥ ಯುವಕರು 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಮಿತಾಭ್ ಕಾಂತ್ ಹೇಳಿರುವುದು ಮತ್ತೆ ಚರ್ಚೆಗೆ ಕಾರಣವಾಗಲಿದೆ.