Wednesday, October 08, 2025
Menu

ಸಿಜೆಐ ಮೇಲೆ ಷೂ ಎಸೆತ: ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದು ಸಲ್ಲದು ಎಂದ ಡಿಸಿಎಂ

ಸುಪ್ರೀಂಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಡಿಸಿಎಂ ಡಿಕೆಶಿವಕುಮಾರ್  ಆಗ್ರಹಿಸಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಸುಪ್ರೀಂಕೋರ್ಟ್ ನಲ್ಲಿ ಶೂ ಎಸೆತ ಪ್ರಕರಣದ ಬಗ್ಗೆ ಕೇಳಿದಾಗ, “ಮುಖ್ಯ ನ್ಯಾಯಮೂರ್ತಿಯವರು ತಪ್ಪಿತಸ್ಥನ ವಿರುದ್ಧ ಕ್ರಮ ತೆಗದುಕೊಳ್ಳಬೇಡಿ ಎಂದಿದ್ದಾರೆ. ಆದರೂ ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು” ಎಂದರು.

ಬಿಗ್ ಬಾಸ್ ಬಂದ್; ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚನೆ

“ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಜೊತೆಗೆ ಉದ್ಯೋಗ ಮುಖ್ಯ ಎಂದೂ ಹೇಳಿದ್ದೇನೆ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ ಎಂದೂ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲಾ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು” ಎಂದರು.

“ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ” ಎಂದು ಹೇಳಿದರು.

ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ಎಕ್ಸ್‌ನಲ್ಲಿ ಪೋಸ್ಟ್‌  ಮಾಡಿರುವ ಬಗ್ಗೆ ಕೇಳಿದಾಗ, “ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿ” ಎಂದು ವ್ಯಂಗ್ಯವಾಡಿದರು.

“ಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲ” ಎಂದು ಲೇವಡಿ ಮಾಡಿದರು.

ಲಾಲ್ ಬಾಗ್ ವಿರೂಪಗೊಳ್ಳುವುದಿಲ್ಲ

ಟನಲ್ ರಸ್ತೆಯಿಂದ ಲಾಲ್ ಬಾಗ್ ವಿರೂಪಗೊಳ್ಳಲಿದೆ ಎನ್ನುವ ಬಗ್ಗೆ ಕೇಳಿದಾಗ, “ಬೆಂಗಳೂರಿನ ಪ್ರಗತಿಗೆ ಟನಲ್ ರಸ್ತೆ ಮಾಡಲಾಗುತ್ತಿದೆ. ನಾವು ಯಾವುದೇ ರೀತಿಯಲ್ಲೂ ಲಾಲ್ ಬಾಗ್ ಅನ್ನು ವಿರೂಪಗೊಳಿಸಲು ಹೋಗುವುದಿಲ್ಲ. ಲಾಲ್ ಬಾಗ್ ಗೆ ಐತಿಹಾಸಿಕ ಮಹತ್ವವಿದೆ, ಅದು ಎಷ್ಟು ಪವಿತ್ರವಾದುದು ಎಂಬುದು ನಮಗೆ ತಿಳಿದಿದೆ. ಮುಂದಿನ ಸೋಮವಾರ ಲಾಲ್ ಬಾಗ್ ಅನ್ನು ಅಧಿಕಾರಿಗಳ ಜೊತೆ ವೀಕ್ಷಣೆ ಮಾಡುತ್ತೇನೆ. ಈ ಕುರಿತು ಯಾರಿಗೂ ಆತಂಕ ಬೇಡ” ಎಂದರು‌. ಸಚಿವ ಸಂಪುಟ ಪುನರ್ ವಿಸ್ತರಣೆ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಗೊತ್ತಿಲ್ಲ” ಎಂದು ಶಿವಕುಮಾರ್‌  ಉತ್ತರಿಸಿದರು.

Related Posts

Leave a Reply

Your email address will not be published. Required fields are marked *