ದೇಶ, ರಾಜ್ಯಾದ್ಯಂತ ಇಂದು ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಅಭಿಷೇಕ, ಪೂಜೆಗಳು ನಡೆಯುತ್ತಿವೆ.
ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲೇಶ್ವರ, ಹನುಮಂತನಗರದ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ, ನೈವೇದ್ಯ, ಅಭಿಷೇಕ ಮಾಡಿಸುತ್ತಿದ್ದಾರೆ. ಗವಿಗಂಗಾಧರೇಶ್ವರ ಸ್ವಾಮಿಗೆ ಹಾಲು ಮತ್ತು ಬಿಲ್ವಪತ್ರೆಯಿಂದ ವಿಶೇಷವಾದ ಅಭಿಷೇಕ ಮತ್ತು ಅರ್ಚನ ನೆರವೇರಿತು.
ಕಾಡು ಮಲ್ಲೇಶ್ವರ ದೇಗುಲದಲ್ಲಿ ಶಿವನಿಗೆ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರುತ್ತಿದೆ. ದೇವಾಲಯದಲ್ಲಿ ವಿಶೇಷ ಅಲಂಕಾರಮಾಡಲಾಗಿದ್ದು, 2,000 ಮುಸುಕಿನ ಜೋಳ, ಕಬ್ಬು ಹಾಗೂ 1,500 ಎಳನೀರಿನಿಂದ ಅಲಂಕಾರ ಮಾಡಲಾಗಿದೆ.
ದೇವಾಲಯಗಳಲ್ಲಿ ಗಂಗಾಜಲ ಅಭಿಷೇಕ, ಫಲಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸಪೂರ್ವಕ ಏಕಾದಶವಾರ ರುದ್ರಾಭಿಷೇಕ ನೆರವೇರಿಸಿ, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದಿನವಿಡೀ ಶಿವನಿಗೆ ನಾನಾ ಅಭಿಷೇಕಗಳು, ರುದ್ರ ಪಾರಾಯಣಗಳೊಂದಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಮೈಸೂರಿನ ಅರಮನೆ ತ್ರಿನೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಚಿನ್ನದ ಮುಖವಾಡ ಧಾರಣೆ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ.
ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆಯುತ್ತಿ ದ್ದಾರೆ. ಅಲ್ಲಿನ ನಂದೀಶ್ವರ, ರಾಮಲಿಂಗೇಶ್ವರ, ಕೊದಂಡರಾಮ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯುತ್ತಿವೆ. ಮಹಾಮಂಗಳಾರತಿ, ಭಜನೆ, ರಾತ್ರಿ ಜಾಗರಣೆ ಕಾರ್ಯಕ್ರಮಗಳನ್ನು ಶಿವ ದೇವಾಲಯಗಳಲ್ಲಿ ಆಯೋಜಿಸಲಾಗಿದೆ.