ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ ಮತ್ತು ಹಿಂದೂ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಐಸಿಸ್ ಉಗ್ರ ಸಂಘಟನೆಯ ಇಬ್ಬರು ಸದಸ್ಯರಿಗೆ ಎನ್‌ಐಎ ಕೋರ್ಟ್ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ಮೂಲದ ಜಬೀವುಲ್ಲಾ ಹಾಗೂ ನದೀಂ ಫೈಜಲ್ ಶಿಕ್ಷೆಗೊಳಗಾದವರು. ಆರೋಪಿಗಳಿಗೆ ತಲಾ 59,000 ರೂ. ದಂಡ ಕೂಡ ವಿಧಿಸಲಾಗಿದೆ.
4 ವರ್ಷಗಳ ಹಿಂದೆ ಆರೋಪಿಗಳು ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸ್ವಾತಂತ್ರ್ಯ ದಿನಾಚರಣೆ ದಿನ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿದ್ದರು.
2022ರ ಆ.15 ರಂದು ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದರು. ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆ ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ತುಂಗಾ ನದಿಯಲ್ಲಿ ಪ್ರಾಯೋಗಿಕ ಸ್ಫೋಟ, ಭಾರತದ ಧ್ವಜ ಸುಟ್ಟ ಪ್ರಕರಣ ಸಂಬಂಧ ಇವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


