ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಕಾಗೆ, ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್ ಅವರಿಗೆ ಅಧಿಕಾರಿಗಳಿಂದ ಅಪಮಾನವಾಗಿರುವ ವಿಚಾರವನ್ನು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ಶಾಸಕರು ತಮಗಾದ ಅಪಮಾನದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಪಕ್ಷಬೇಧ ಮರೆತು ಬಹುತೇಕ ಶಾಸಕರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಖಾದರ್ ಅವರು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
ಮೊದಲು ವಿಷಯ ಪ್ರಸ್ತಾಪಿಸಿದ ರಾಜು ಕಾಗೆ, ಫೆ.11 ರಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆ ಮುಗಿದ ನಂತರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ಬಳಿ ಹೋಗಿ ತಮ ಕ್ಷೇತ್ರದಲ್ಲಿನ ಭವನವೊಂದರ ನಿರ್ಮಾಣ ಕೆಲಸದ ವಿಚಾರವಾಗಿ ಪ್ರಸ್ತಾಪಿಸಿದೆ. ಆಗ ಅವರು ಜಿಲ್ಲಾಧಿಕಾರಿಗಳಿಗೂ ತಲೆಯಿಲ್ಲ, ನಿಮಗೂ ತಲೆಯಿಲ್ಲ ಎಂದು ಅಪಮಾನ ಮಾಡಿದ್ದಾರೆ. ನನ್ನ ಮಾತಿಗೂ ಬೆಲೆ ಕೊಡದೆ ಹೋಗಿದ್ದಾರೆ.
ಉದ್ಧಟತನದ ಮಾತನ್ನಾಡಿದ್ದಾರೆ. 25 ವರ್ಷದಿಂದ ಶಾಸಕನಾಗಿದ್ದೇನೆ. ಇದುವರೆಗೂ ಈ ರೀತಿ ಉದ್ಧಟತನವನ್ನು ಯಾವ ಅಧಿಕಾರಿಯೂ ತೋರಿರಲಿಲ್ಲ. ಸರ್ವಾಧಿಕಾರಿ ಧೋರಣೆಯಲ್ಲ. ಸಾರ್ವಜನಿಕ ಕೆಲಸ ಮಾಡುವುದು ಅಧಿಕಾರಿಯ ಕೆಲಸ. ನಾವು ಜನಪ್ರತಿನಿಧಿ. ನಮಗೆ ಘೋರ ಅಪಮಾನ ಮಾಡಿದ ಅಧಿಕಾರಿಗೆ ಶಿಕ್ಷೆಯಾಗಬೇಕು. ಅವರನ್ನು ವರ್ಗಾವಣೆ ಮಾಡುವಂತೆ 50 ರಿಂದ 60 ಶಾಸಕರು ಸಹಿ ಹಾಕಿ ಪತ್ರ ಕೊಟ್ಟಿದ್ದಾರೆ. ಇದನ್ನು ಹಕ್ಕುಚ್ಯುತಿ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಇದಕ್ಕೆ ದನಿಗೂಡಿಸಿ ಮಾತನಾಡಿ, ಸದನದಲ್ಲಿ 224 ಶಾಸಕರಿಗೆ ಮಾಡಿರುವ ಅಪಮಾನ. ಅವರೊಬ್ಬರಿಗೆ ಮಾಡಿರುವ ಅಪಮಾನವಲ್ಲ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾದ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ, ರಾಜು ಕಾಗೆ ಅವರು ತಮ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಅಧಿಕಾರಿಯ ಬಳಿ ಮಾತನಾಡಲು ಹೋದಾಗ ಸೌಜನ್ಯದಿಂದ ಮಾತನಾಡದೆ ದುರ್ವರ್ತನೆ ತೋರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಮತ್ತೊಬ್ಬ ಶಾಸಕ ಬಸವರಾಜ್ ಮತ್ತಿಮೋಡ್ ಮಾತನಾಡಿ, ತಮ ಕ್ಷೇತ್ರ ವ್ಯಾಪ್ತಿಯ ಪುರಸಭೆ ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ತಮನ್ನು ನೂಕಿದ್ದಾರೆ. ಇಬ್ಬರು ಸದಸ್ಯರನ್ನು ಅಪಹರಿಸಲು ಸಹಕಾರ ನೀಡಿದ್ದಾರೆ. ಶಾಸಕರಿಗೆ ಗೌರವವೇ ಇಲ್ಲದಂತಾಗಿದೆ. ಎದೆ ಮೇಲೆ ಕೈ ಹಾಕಿ ನೂಕಿದ್ದಾರೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ, ಆಡಳಿತ ಪಕ್ಷದವರಿಗೆ ಒಂದು ಪೆಟ್ಟಾದರೆ, ವಿರೋಧಪಕ್ಷದವರಿಗೆ ಎರಡು ಪೆಟ್ಟು ಎನ್ನುವಂತಾಗಿದೆ. ಎಲ್ಲಿಗೆ ಹೋಗುತ್ತಿದ್ದೇವೆ?, ಅಧಿಕಾರಿಗಳೇ ಗೌರವ ಕೊಡಲ್ಲ ಎಂದರೆ ಹೇಗೆ?, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಗೆ ಸರ್ಕಾರವನ್ನು ಪ್ರಶ್ನೆ ಮಾಡುವಷ್ಟು ಅಧಿಕಾರವಿರುತ್ತದೆ. ಅಧಿಕಾರಿಗಳು ಬೆಲೆ ಕೊಡುವುದಿಲ್ಲ ಎಂದಾದರೆ ಸಮಿತಿಯನ್ನು ಮುಚ್ಚಿಬಿಡಿ. ಅಧಿಕಾರಿಗಳೇ ರಾಜ್ಯಭಾರ ಮಾಡಲಿ, ನಾವು ಸದನಕ್ಕೆ ಏಕೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಬೆಳಗಾವಿಯಲ್ಲಿ ಲಿಂಗಾಯತರ ಸಮಾವೇಶ ನಡೆಸುವಾಗ ಎಡಿಜಿಪಿ ಕಾನೂನು ಮೀರಿ ವರ್ತಿಸಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮವಾಗಬೇಕು. ತಕ್ಕ ನಿರ್ದೇಶನ ಕೊಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನಡೆದ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.
ಶಾಸಕಾಂಗದ ಹಕ್ಕಿಗೆ ಚ್ಯುತಿಯಾಗುವ ವಿಚಾರದಲ್ಲಿ ಶಾಸಕಾಂಗಕ್ಕೆ ಅಗೌರವ ಸಲ್ಲಿಸಿದರೆ ಸಭಾಧ್ಯಕ್ಷರು ಕೈಗೊಳ್ಳುವ ಕ್ರಮವನ್ನು ಪ್ರಶ್ನಿಸಲು ಸುಪ್ರೀಂಕೋರ್ಟ್‌ಗೂ ಅಧಿಕಾರವಿಲ್ಲ ಎಂದು ಹೇಳಿ ಸಂಬಂಧಪಟ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಈ ಬಗ್ಗೆ ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಅಧಿಕಾರಿಗಳನ್ನು ರಕ್ಷಣೆ ಮಾಡುವುದಾಗಲೀ, ತಪ್ಪು ಮಾಡಿದವರ ಬಗ್ಗೆ ಸಬೂಬು ಹೇಳುವುದಾಗಲೀ ಮಾಡುವುದಿಲ್ಲ. ಶಾಸಕರಿಬ್ಬರು ಸದನದಲ್ಲಿ ತಮ ನೋವನ್ನು ತೋಡಿಕೊಂಡಿದ್ದರು. ಶಾಸಕರು, ಸಂಬಂಧಿಸಿದ ಅಧಿಕಾರಿಗಳು, ಕಂದಾಯ ಸಚಿವರು ಹಾಗೂ ಸಮಿತಿಯ ಅಧ್ಯಕ್ಷರಾದ ಸಿ.ಸಿ.ಪಾಟೀಲರನ್ನು ತಮ ಕಚೇರಿಗೆ ಕರೆಸಿ ಚರ್ಚೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಬೇಕು ಎಂಬ ಸಲಹೆಯನ್ನು ಮಾಡಿದರು.
ಆಗ ಅಶೋಕ, ಇದು ಕಾಜಿ ನ್ಯಾಯ. ಇದು ಬೇಡ. ಅಧಿಕಾರಿಗಳಿಗೆ ಛೀಮಾರಿ ಹಾಕಿ ಎಂದು ಆಗ್ರಹಿಸಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು.ಸಭಾಧ್ಯಕ್ಷರು ಮಾತನಾಡಿ, ರಾಜು ಕಾಗೆ ಹಾಗೂ ಮತ್ತಿಮೋಡ್ ಅವರು ತಮಗಾಗಿರುವ ಅಪಮಾನದ ಬಗ್ಗೆ ಲಿಖಿತವಾಗಿ ಕೊಟ್ಟು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಲಬುರಗಿಯ ಹೆಚ್ಚುವರಿ ಎಸ್ಪಿ ಅವರಿಂದ ಆದ ಅಪಮಾನವನ್ನು ಪ್ರಸ್ತಾಪಿಸಿದ್ದಾರೆ.
ವೇತನ, ಭತ್ಯೆಗಿಂತ ಗೌರವ ಬೇಕು ಎಂಬುದನ್ನು ಜನರು ಅಪೇಕ್ಷೆ ಪಡುತ್ತಾರೆ. ಅನಂತರ ಇತರೆ ಸೌಲಭ್ಯಗಳು. ಮಾತನಾಡುವ ಸೌಜನ್ಯ ತೋರದ ಅಧಿಕಾರಿಯ ವರ್ತನೆಯನ್ನು ಸಹಿಸುವುದಿಲ್ಲ. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಇದು ಸದನಕ್ಕೆ ಮಾಡಿರುವ ಅಪಮಾನ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೇರೆಯವರಿಗೂ ಇದು ಎಚ್ಚರಿಕೆ ಗಂಟೆಯಾಗಬೇಕು. ಇದನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತೇನೆ. ನಾವೇಕೆ ಅಧಿಕಾರಿಗಳಿಗೆ ಸಮಯ ಕೊಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮತ್ತೊಮ್ಮೆ ಕಾನೂನು ಸಚಿವರು ಮಾತನಾಡಿ, ಸಾಮಾಜಿಕ ನ್ಯಾಯ ಅಧಿಕಾರಿಗಳಿಗೂ ಕೊಡಬೇಕು. ಎಲ್ಲರನ್ನೂ ಕರೆದು ನಿಮ ನಿರ್ಣಯವನ್ನು ಪುನರ್ ಪರಿಶೀಲನೆ ಮಾಡಿ ಎಂದು ಮನವಿ ಮಾಡಿದರು.ಇದಕ್ಕೆ ಹಲವು ಶಾಸಕರು ಪಕ್ಷಬೇಧ ಮರೆತು ಸಭಾಧ್ಯಕ್ಷರು ನೀಡಿದ ನಿರ್ಣಯವನ್ನು ಸ್ವಾಗತಿಸಿದರು. ಆಗ ಸಭಾಧ್ಯಕ್ಷರು ಮಾತನಾಡಿ ಶಾಸಕರು ಸರ್ಕಾರದ ಪರ ನಿಲ್ಲಬೇಕು. ಹೀಗಾಗಿ ಈ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಲಾಗುವುದು ಎಂದರು.
ಅಶೋಕ ಮಾತನಾಡಿ, ಸಭಾಧ್ಯಕ್ಷರೇ ನಿರ್ಣಯವನ್ನು ಸ್ವಾಗತಿಸುತ್ತೇವೆ. ಎಲ್ಲರೂ ಗೌರವಕ್ಕಾಗಿಯೇ ಬದುಕುವುದು. ಹಕ್ಕು ಬಾಧ್ಯತಾ ಸಮಿತಿಯು ಅಧಿಕಾರಿಗಳಿಗೆ ಅವಕಾಶ, ನೋಟೀಸ್ ಕೊಟ್ಟು ತೀರ್ಮಾನ ಮಾಡುತ್ತದೆ ಎಂದರು.
ಕಾನೂನು ಸಚಿವರ ಸಲಹೆಯನ್ನು ಒಪ್ಪದ ಸಭಾಧ್ಯಕ್ಷರು, ನನ್ನ ಆತಸಾಕ್ಷಿಯ ಪ್ರಕಾರ ಇಂತಹ ಅಧಿಕಾರಿಗಳಿಗೆ ಯಾವುದೇ ಅವಕಾಶ ಕೊಡಬಾರದು. ಹಕ್ಕುಚ್ಯುತಿ ಸಮಿತಿ ಮುಂದೆ ಹೋಗಲಿ. ನಮಗೆ ಅಧಿಕಾರಿ ಮುಖ್ಯವಲ್ಲ, ಶಾಸಕರು ಮುಖ್ಯ. ಶಾಸಕರಿಗೆ ಅಗೌರವ ತೋರಿರುವುದನ್ನು ಸಹಿಸುವುದಿಲ್ಲ. ಅಧಿಕಾರಿಗಳು ಸರ್ಕಾರದ ಸೇವಕರು. ಶಾಸಕರ ಅಪಮಾನವನ್ನು ಸಹಿಸುವುದಿಲ್ಲ. ಶಾಸಕರು ಕರೆದಾಗ ಮಾತನಾಡಬೇಕಿತ್ತು. ಅವರಿಗೆ ಶಿಕ್ಷೆಯಾಗಲಿ ಎಂದು ಖಾರವಾಗಿ ನುಡಿದು ಮುಂದಿನ ಕಾರ್ಯಕಲಾಪಕ್ಕೆ ಅನುವು ಮಾಡಿಕೊಟ್ಟರು.