Wednesday, November 12, 2025
Menu

ಕುರುಬರ ಸಂಘದ ಹಾಸ್ಟೆಲ್ ಕಟ್ಟಡ 18 ತಿಂಗಳಲ್ಲಿ ಉದ್ಘಾಟನೆ: ಸಚಿವ ಬೈರತಿ ಸುರೇಶ್

bhirati suresh

ಬೆಂಗಳೂರು: ಬೆಂಗಳೂರಿನ ಗಾಂಧಿನಗರದಲ್ಲಿ ರಾಜ್ಯ ಕುರುಬರ ಸಂಘದ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಮುಂದಿನ 18 ತಿಂಗಳೊಳಗೆ ಪೂರ್ಣವಾಗಲಿದೆ  ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬುಧವಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಣ್ಣ-ತಮ್ಮಂದಿರಂತೆ ಅನ್ಯೋನ್ಯವಾಗಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯಕ್ಕಷ್ಟೇ ಅಲ್ಲ, ರಾಜ್ಯದ ಏಳೂವರೆ ಕೋಟಿ ಜನರ ಧ್ವನಿಯಾಗಿ, ಎಲ್ಲಾ ಸಮುದಾಯಗಳ ಪರವಾಗಿ ಜಾತ್ಯತೀತ ಮನೋಭಾವನೆಯಿಂದ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಕುರುಬ ಸಮಾಜ ಬಲಿಷ್ಠವಾಗಿದ್ದು, ಕೆಲವರು  ಎಲ್ಲೋ ಕುಳಿತು ನಮ್ಮ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸಮಾಜದ ಕಾಗಿನೆಲೆ ಪೀಠವನ್ನು ಸ್ಥಾಪನೆ ಮಾಡುವಲ್ಲಿ ಸಿದ್ದರಾಮಯ್ಯನವರ ಪಾತ್ರ ಪ್ರಮುಖವಾಗಿದೆ. ಅವರು ಪೀಠಕ್ಕೆ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ನೀಡಿದ್ದು, ಇತರ ಸಮುದಾಯಗಳಿಗೂ ಯಥೇಚ್ಛವಾಗಿ ಅನುದಾನಗಳನ್ನು ನೀಡುವ ಮೂಲಕ ಎಲ್ಲಾ ಸಮುದಾಯದ ನಾಯಕರಾಗಿದ್ದಾರೆ ಎಂದು ಬೈರತಿ ಸುರೇಶ್ ಶ್ಲಾಘಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗೋದು ಸುಲಭದ ಮಾತಲ್ಲ. ಸಿದ್ದರಾಮಯ್ಯನವರು ಪ್ರಜಾಪ್ರಭುತಾತ್ಮಕ ರೀತಿಯಲ್ಲಿ ಪಕ್ಷದ ಶಾಸಕಾಂಗ ಸಭೆಯಲ್ಲಿ ನಾಯಕರಾಗಿ, ರಾಷ್ಟ್ರೀಯ ನಾಯಕರ ಪ್ರೀತಿಗೆ ಪಾತ್ರರಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಸಮರ್ಥವಾಗಿ, ಪ್ರಾಮಾಣಿಕವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ದೇವಸ್ಥಾನ ಬದಲಿಗೆ ಹಾಸ್ಟೆಲ್ ಕಟ್ಟಿ

ಬೆಂಗಳೂರಿನ ಕುರುಬರ ಸಂಘದ ಕಟ್ಟಡವನ್ನು ಸರ್ಕಾರದಿಂದಾಗಲೀ ಅಥವಾ ಸಿಎಸ್ಆರ್ ನಿಂದಾಗಲೀ ದೇಣಿಗೆ ಪಡೆಯದೇ ಸಮುದಾಯದ ಮುಖಂಡರೆಲ್ಲಾ ಸೇರಿ ನಿರ್ಮಾಣ ಮಾಡುತ್ತಿದ್ದೇವೆ. ಇದರಿಂದ ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮಾಜದವರು ತಮ್ಮ ತಮ್ಮ ನಗರ ಮತ್ತು ಪಟ್ಟಣಗಳಲ್ಲಿ ದೇವಸ್ಥಾನಗಳನ್ನು ಕಟ್ಟಿಸುವ ಬದಲು ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹಾಸ್ಟೆಲ್, ಶಾಲಾಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಬೇಕೆಂದು ಸಚಿವ ಸುರೇಶ್ ಅವರು ಕರೆ ನೀಡಿದರು.

Related Posts

Leave a Reply

Your email address will not be published. Required fields are marked *