ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು ಶತಾಯುಷಿ ಆಗಲಿದ್ದಾರೆ. ಇವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೊಂದು ಚುನಾವಣೆಗೆ ನಿಲ್ಲಬಹುದು. ಇವರು ಉತ್ಸಾಹ ತೋರಿಸಿದರೆ ಪಕ್ಷ ಮತ್ತೆ ಟಿಕೆಟ್ ಕೊಡಲು ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ 95 ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದರು. ಅಂತರ್ಜಾತಿ ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ಆದರೆ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ. ಲಿಂಗ ತಾರತಮ್ಯ, ಜಾತಿ ತಾತತಮ್ಯ ನಿವಾರಣೆ ಆಗಬೇಕಾದರೆ ಇಂಥಾ ಸಾಮೂಹಿಕ ವಿವಾಹಗಳು , ಅಂತರಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ನಮ್ಮ ಸರ್ಕಾರ ಮಹಿಳೆಯರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸಲು ಕಾರ್ಯಕ್ರಮಗಳನ್ನು, ಗ್ಯಾರಂಟಿಗಳನ್ನು ರೂಪಿಸಿ ಜಾರಿ ಮಾಡಿದೆ. ಜಾತಿ, ವರ್ಗ ಇಲ್ಲದ ಸಮಾಜ ನಿರ್ಮಾಣ ಬಸವಣ್ಣ ಮತ್ತು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರ್ಕಾರ ಈ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.
ಸಚಿವರಾದ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್, ಎಸ್.ಮಲ್ಲಿಕಾರ್ಜುನ್, ಸಂಸದರಾದ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಹೆಚ್.ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.