ಬೆಂಗಳೂರು ಪಬ್ನಲ್ಲಿ ಶಾರುಖ್ ಮಗ ಆರ್ಯನ್ ಖಾನ್ ದುರ್ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪಬ್ ಗೆ ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ಪಬ್ ಮ್ಯಾನೇಜರ್ ಅನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಿಸಿಟಿವಿ ಪರಿಶೀಲನೆ ಮಾಡಿ ಆರ್ಯನ್ ಖಾನ್ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ್ದಾರ, ಯಾರಿಗೆ ತೋರಿಸಿದ್ದು, ಮಹಿಳೆಗೆ ತೋರಿಸಿದ್ದಾ, ಉದ್ದೇಶ ಪೂರ್ವಕ ವರ್ತನೆಯಾ ಎಂದು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ಘಟನೆ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನವೆಂಬರ್ 28 ರಂದು SOURBERRY ಪಬ್ ಒಪನ್ ಆಗಿತ್ತು, ಅತಿಥಿಯಾಗಿ ನವೆಂಬರ್29 ರಂದು ಆರ್ಯನ್ ಖಾನ್ ಬಂದಿದ್ದರು.
ಆರ್ಯನ್ ಖಾನ್ಗೆ ಜೊತೆಯಾಗಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಅಕ್ಕ ಪಕ್ಕದಲ್ಲೇ ನಿಂತುಕೊಂಡಿದ್ದರು. ಜನರತ್ತ ಕೈಬೀಸಿದ ಆರ್ಯನ್ ಖಾನ್ ಅಸಭ್ಯವಾಗಿ ಎರಡೂ ಕೈಗಳನ್ನ ಎತ್ತಿ ಮಧ್ಯದ ಬೆರಳು ತೋರಿಸಿದ್ದರು. ನಲಪಾಡ್ ಹಾಗೂ ಝೈದ್ ಖಾನ್ ಇಬ್ಬರೂ ಎಂಜಾಯ್ ಮಾಡಿ ನಕ್ಕಿದ್ದರು ಎಂದು ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಕನ್ನಡ ನಾಡಿನಲ್ಲಿ ಕನ್ನಡಿಗರೆದುರು ನಿಂತು ಆರ್ಯನ್ ಖಾನ್ ಅಸಭ್ಯ ವರ್ತನೆ ತೋರಿದ್ದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಆರ್ಯನ್ ಖಾನ್ ಜನರನ್ನು ನೋಡಿ ಕೈ ತೋರಿಸಲಿಲ್ಲ. ಅವರ ಸ್ನೇಹಿತರೊಬ್ಬರು ನಿಂತಿದ್ದನ್ನು ನೋಡಿ ಫ್ರೆಂಡ್ಶಿಪ್ನಲ್ಲಿ ಕೈ ತೋರಿಸಿದ್ದಾರೆ. ಆದರೂ ಜನರ ಮಧ್ಯೆ ನಿಂತು ಮಧ್ಯದ ಬೆರಳು ತೋರಿಸಿದ್ದು ತಪ್ಪು. ಆ ಸಂದರ್ಭಕ್ಕೆ ನನಗೆ ಅದು ತಪ್ಪು ಅನ್ನಿಸಲಿಲ್ಲ. ಜನಕ್ಕೆ ತೋರಿಸಿದ್ದರೆ ತಪ್ಪಾಗುತ್ತಿತ್ತು ಎಂದು ಸಮರ್ಥಿಸುವ ಪ್ರಯತ್ನ ನಡೆಸಿದ್ದಾರೆ.


