ಮಹಿಳಾ ಪೇದೆಗೆ ತಾಳಿ ಕಟ್ಟಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಆಕೆ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಂಡು ವಂಚನೆ ಎಸಗಿದ ಆರೋಪದಡಿ ಪೇದೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಅಮೃತೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಭಗವಂತರಾಯ ಬಸಂತರಾಯ ಬಿರಾದಾರ್ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆರೋಪಿ ದೂರುದಾರೆಯ ಮನೆಯಲ್ಲಿನ ಸಾಯಿಬಾಬಾ ಪೋಟೊ ಮುಂದೆ ತಾಳಿ ಕಟ್ಟಿ ಲೈಂಗಿಕವಾಗಿ ಬಳಸಿಕೊಂಡಿದ್ದ. ನೀನು ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ಕೆಲವೊಂದು ಸಮಸ್ಯೆಗಳಿವೆ. ಮದುವೆಯಾದ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು. ವಿವಾಹ ನೋಂದಾಯಿಸಿದ ನಂತರ ಎಲ್ಲರಿಗೂ ತಿಳಿಸೋಣವೆಂದು ಹೇಳಿರುವುದು ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿಯಲಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ತಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂಬ ಕಾರಣ ನೀಡಿ ಹೆಂಡತಿಯಾಗಿ ಸ್ವೀಕರಿಸಲು ಆರೋಪಿ ನಿರಾಕರಿಸುತ್ತಿರುವುದು ಖಚಿತವಾದ ತಕ್ಷಣ ಸಂತ್ರಸ್ತೆ ದೂರು ನೀಡಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ( ದೌರ್ಜನ್ಯ ತಡೆ ) ಕಾಯ್ದೆಯ ಸೆಕ್ಷನ್ 18ಎ ಅಡಿ ಅಪರಾಧ, ನಿರೀಕ್ಷಣಾ ಜಾಮೀನಿಗೆ ಆರೋಪಿ ಅರ್ಹನಾಗಿಲ್ಲ ಎಂದು ಪೀಠ ಹೇಳಿದೆ.
ಆರೋಪಿ ಮತ್ತು ಸಂತ್ರಸ್ತೆ ಪೇದೆಗಳಾಗಿದ್ದು ಅಮೃತೂರು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಾಳಿ ಕಟ್ಟಿದ ಬಳಿಕ ಪತ್ನಿಯಾಗಿ ಬಹಿರಂಗಪಡಿಸಲು ಒತ್ತಾಯಿಸಿದ್ದಕ್ಕೆ ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದ. ಪದೇ ಪದೆ ಜಾತಿ ಹೆಸರು ಉಲ್ಲೇಖಿಸಿ ನಿಂದಿಸಿದ್ದಾಗಿ ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದರು.
ಬಂಧನ ಭೀತಿಯಿಂದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತುಮಕೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಹಾಗಾಗಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದನು.


