ತುಮಕೂರು ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ರಾಜೇಂದ್ರ ತರಬೇತಿ ಶಿಬಿರದಲ್ಲಿ ತಪ್ಪು ಹೇಳಿಕೊಡುವ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿರುವುದಾಗಿ ಆರೋಪಿಸಿ ಐವರು ಮಹಿಳಾ ಸಿಬ್ಬಂದಿ ಡಿಸಿ, ಮಹಿಳಾ ಆಯೋಗ ಮತ್ತು ಅಗ್ನಿಶಾಮಕದಳ ಐಜಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ದೂರಿನ ಅರ್ಜಿ ಜೊತೆಗೆ ಪೆನ್ಡ್ರೈವ್ ದಾಖಲೆ ಸಲ್ಲಿಸಿದ್ದಾರೆ. ತರಬೇತಿಯ ವೇಳೆ ಮಹಿಳಾ ಸಿಬ್ಬಂದಿ ಜತೆ ಡ್ಯಾನ್ಸ್ ಮಾಡಿದ ವೀಡಿಯೊ ವೈರಲ್ ಆಗಿದೆ.
ಕಮಾಂಡೆಂಟ್ ರಾಜೇಂದ್ರ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ತುಮಕೂರು ಎಸ್ಪಿ ಸೂಚಿಸಿದ್ದು, ತುಮಕೂರಿನ ಸೆನ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.
ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ವಿಕೆ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ಗೈಡ್ಲೈನ್ ಪ್ರಕಾರ ಇರುವ ಇಂಟರ್ನಲ್ ಕಮಿಟಿಯಿಂದ ಕೆಲಸದ ಸಮಯದ ಕಿರುಕುಳ ಹಿನ್ನಲೆ ತನಿಖೆ ನಡೆಸಲಾಗುತ್ತಿದೆ. ಡಿವೈಎಸ್ಪಿ ಸೆನ್ ಮಹಿಳಾ ಅಧಿಕಾರಿಯಾಗಿರುವುದರಿಂದ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಏಪ್ರಿಲ್ 24 ರಿಂದ ಮೇ 3ವರೆಗೆ ಕೊರಟಗೆರೆಯ ಸಿದ್ದರ ಬೆಟ್ಟದಲ್ಲಿ ಹೊಸದಾಗಿ ನೋಂದಣಿಯಾದ 235 ಗೃಹರಕ್ಷಕರಿಗೆ ಹತ್ತು ದಿನ ತರಬೇತಿ ಶಿಬಿರ ನಡೆಸಲಾಗಿತ್ತು. ಈ ಮಧ್ಯೆ ಏಪ್ರಿಲ್ 26ರ ರಾತ್ರಿ ಗೃಹರಕ್ಷಕಿಗೆ ಉಸಿರಾಟದ ತೊಂದರೆಯಿಂದ ಎದೆ ನೋವು ಕಾಣಿಸಿಕೊಂಡಿತ್ತು. ಕಮಾಂಡೆಂಟ್ ಆರ್. ರಾಜೇಂದ್ರನ್ ಅಲ್ಲಿಗೆ ಮದ್ಯಪಾನ ಮಾಡಿ ಬಂದಿದ್ದರು. ಪ್ರಥಮ ಚಿಕಿತ್ಸೆ ನೀಡುವ ನೆಪದಲ್ಲಿ ಗೃಹರಕ್ಷಕಿಯ ಖಾಸಗಿ ಅಂಗಗಳನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಅದೇ ದಿನ ರಾತ್ರಿ ಮತ್ತೊಬ್ಬ ಗೃಹರಕ್ಷಕಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಮರುದಿನ ಏ. 27ರಂದು ಬೆಳಿಗ್ಗೆ ಬೆಟ್ಟ ಹತ್ತುವ ಸಂದರ್ಭದಲ್ಲಿ ಗೃಹರಕ್ಷಕಿಯೋರ್ವರ ಮೈಕೈ ಮುಟ್ಟಿ ಕೆಟ್ಟದಾಗಿ ವರ್ತಿಸಿದ್ದಾರೆ. ಗೃಹರಕ್ಷಕಿಯರಿಗೆ ತಿದ್ದಿ ಹೇಳಿಕೊಡುವ ನೆಪದಲ್ಲಿ ದೇಹದ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾರೆ. ಇದರಿಂದ ನಮ್ಮ ಮಾನ, ಗೌರವಕ್ಕೆ ಧಕ್ಕೆ ಹಾಗೂ ಮಾನಸಿಕ ನೋವು ಉಂಟಾಗಿರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.