ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎನ್ನಲಾಗಿರುವ ಮೈಲಾರಿ ಎಂಬಾತನನ್ನು ಬಾಗಲಕೋಟೆಯ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಮೈಲಾರಿಹಾಗೂ ಆತನ ಐವರು ಸಹಚರರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಘಟನೆ ಅಕ್ಟೋಬರ್ 24 ರಂದು ಬೆಳಗಾವಿಯಲ್ಲಿ ನಡೆದಿದ್ದು, ಬಾಲಕಿ ಬೆಳಗಾವಿ ಮೂಲದವಳು. ಅಂದು ಬೆಳಗಾವಿ ಜಿಲ್ಲೆಯ ಒಂದು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮೈಲಾರಿ ಬಂದಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಬಾಲಕಿ ಬಂದಿದ್ದಳು.
ಕಾರ್ಯಕ್ರಮ ಮುಗಿದ ಬಳಿಕ ಬಾಲಕಿಯನ್ನು ಲಾಡ್ಜ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೊ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಘಟನೆ ಬಗ್ಗೆ ಎಲ್ಲಿಯೂ ಬಾಯಿ ಬಿಡುವುದಿಲ್ಲ ಎಂದು ವೀಡಿಯೊ ಮಾಡಿ ಹೇಳಿಕೆ ಪಡೆದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಡಿ.14 ರಂದು ಸಂತ್ರಸ್ತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿ.15 ರಂದು ಬಾಗಲಕೋಟೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.


