ಬೆಂಗಳೂರು ಹೊರವಲಯದ ಆನೇಕಲ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಹಿಳೆ ಮೇಲೆ ಸ್ಕ್ಯಾನಿಂಗ್ ವೇಳೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಆರೋಪದಡಿ ಆನೇಕಲ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನವೆಂಬರ್ 10ರಂದು ಹೊಟ್ಟೆ ನೋವು ಕಾರಣ ಮಹಿಳೆ ಪತಿ ಜೊತೆ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿದ್ದರು. ಸ್ಕ್ಯಾನಿಂಗ್ ಸಮಯದಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಲಾಗಿದೆ. ಮಹಿಳೆ ಸ್ವತಃ ವೀಡಿಯೊ ಸಲ್ಲಿಸಿ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿದ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿ ಜಯಕುಮಾರ್‌ನನ್ನು ಬಿಡುಗಡೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾಕಾರರು ಪಟ್ಟಣದ ತಾಲೂಕು ಕಚೇರಿ ಸರ್ಕಲ್‌ನಲ್ಲಿ ಆರೋಪಿ ಜಯಕುಮಾರ್‌ನ ಪ್ರತಿಕೃತಿ ದಹನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಶಿವರಾಮೇಗೌಡ ಬಣದ ಸದಸ್ಯರು ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ನೇತೃತ್ವದಲ್ಲಿ ಆನೇಕಲ್ ಪೊಲೀಸ್ ಠಾಣೆ ಬಳಿ ಧರಣಿ ನಡೆಸಿದರು. ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಅಡಿಷನಲ್ ಎಸ್ಪಿ ನಾಗರಾಜ್ ಹೇಳಿಕೆ ನೀಡಿ, ಈಗಾಗಲೇ ಎರಡು ವಿಶೇಷ ತಂಡ ಆರೋಪಿಯ ಹುಡುಕಾಟ ನಡೆಸುತ್ತಿವೆ. ಮೂರು ನಾಲ್ಕು ದಿನಗಳಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್‌ರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆ ಹೋರಾಟಗಾರರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.


