ಅಯೋಧ್ಯೆ ರಾಮ ಜನ್ಮಭೂಮಿಯ ಗೆಸ್ಟ್ಹೌಸ್ನಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನು ಪೊಲೀಸರು ಭೇದಿಸಿದ್ದು, 11 ಮಹಿಳೆಯರು ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿಥಿ ಗೃಹದ ಮಾಲೀಕ ಗಣೇಶ್ ಅಗರ್ವಾಲ್ ಮತ್ತು ಅವರ ಇಬ್ಬರು ಸಹಚರರನ್ನು ಕೂಡ ಬಂಧಿಸಿರುವುದಾಗಿ ಪೊಲೀಸ್ ವೃತ್ತ ಅಧಿಕಾರಿ ಶೈಲೇಂದ್ರ ಸಿಂಗ್ ಹೇಳಿದ್ದಾರೆ. ದಾಳಿ ವೇಳೆ ಮಹಿಳೆಯರು ಓಡಿಹೋಗಲು ಪ್ರಯತ್ನಿಸಿದರು. ಹೊರಗೆ ನಿಯೋಜಿಸಲಾದ ಮಹಿಳಾ ಪೊಲೀಸ್ ಅವರನ್ನು ತಡೆದು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.
ರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದ 80 ವರ್ಷದ ಮಹಿಳೆ ಸಾವು
ಅಯೋಧ್ಯೆಯ ದರ್ಶನ ನಗರ ವೈದ್ಯಕೀಯ ಕಾಲೇಜು ಬಳಿ ತಡರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದ 80 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಬಿಟ್ಟು ಹೋಗಿರುವ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ರಿಕ್ಷಾದಿಂದ ಇಳಿಸಿ ಸ್ಥಳದಿಂದ ಹೋಗುತ್ತಿರುವುದು ದಾಖಲಾಗಿದೆ.
ಮೃತ ಮಹಿಳೆಯನ್ನು ಗುರುತಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಮಹಿಳೆಯ ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಪೊಲೀಸರು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರೆಂದು ಅಯೋಧ್ಯೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಿಪಿ ಪಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ.