ಸುರಂಗ ಮಾರ್ಗ ಕುಸಿದು ಬಿದ್ದ ಪರಿಣಾಮ 30 ಕಾರ್ಮಿಕರು ಸಿಲುಕಿರುವ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.
ಶ್ರೀಶೈಲ ಡ್ಯಾಮ್ ಬಳಿ ನೀರು ಸೋರಿಕೆ ಆಗುತ್ತಿದೆ ಎಂಬ ಕಾರಣಕ್ಕೆ ದುರಸ್ಥಿ ಕಾರ್ಯಕ್ಕೆ ಕಾರ್ಮಿಕರು ತೆರಳಿದ್ದಾಗ ಸುರಂಗದ ಒಂದು ಭಾಗ ಕುಸಿದಿದೆ ಎಂದು ಹೇಳಲಾಗಿದೆ.
ಸುರಂಗ ಕುಸಿತದಿಂದ ಮೂವರು ಪಾರಾಗಿ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದು, ೩೦ ಮಂದಿ ಸಿಲುಕಿದ್ಧಾರೆ ಎಂದು ಹೇಳಲಾಗಿದೆ. ಸುರಂಗದ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಕಂಪನಿ ರಕ್ಷಣೆಗೆ ತಂಡವನ್ನು ಕಳುಹಿಸಿದೆ.
ನಾಲ್ಕು ದಿನಗಳ ಹಿಂದೆಯಷ್ಟೇ ಸುರಂಗ ಉದ್ಘಾಟನೆ ಆಗಿದ್ದು, ಶ್ರೀಶೈಲ ಜಲಾಶಯದ ಹಿಂಭಾಗದ ಡೊಮಲಪೇಟಾದಲ್ಲಿ ಸುಮಾರು 14ನೇ ಕಿ.ಮೀ. ಬಳಿ ಸುರಂಗದ ಮೇಲ್ಛಾವಣಿ 3 ಮೀಟರ್ ನಷ್ಟು ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಘಟನೆಗೆ ಆಘಾತ ವ್ಯಕ್ತಪಡಿಸಿ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ನೀರಾವರಿ ಸಚಿವ ಉತ್ತಮ್ ಕುಮಾರ್ ವಿಶೇಷ ಹೆಲಿಕಾಫ್ಟರ್ ಮೂಲಕ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿಗೆ ತೆರಳಿದ್ದಾರೆ.