ಒಡಿಶಾದ ಧೆಂಕಾನಾಲ್ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯ ವೇಳೆ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದು ಹಲವು ಕಾರ್ಮಿಕರು ಮೃತಪಟ್ಟಿರುವುದಾಗಿ ಅನುಮಾನ ವ್ಯಕ್ತವಾಗಿದೆ.
ಮೊಟಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಸಮೀಪ ಕಾರ್ಮಿಕರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ದೊಡ್ಡ ಬಂಡೆಗಳು ಕುಸಿದು ಬಿದ್ದಿವೆ. ಆಗ ಹಲವು ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ, ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ, ಪ್ರಾಣ ಕಳೆದುಕೊಂಡಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ದಳ, ಒಡಿಶಾ ವಿಪತ್ತು ತ್ವರಿತ ಕಾರ್ಯಪಡೆ, ಶ್ವಾನ ದಳಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಧೆಂಕಾನಾಲ್ ಜಿಲ್ಲಾಧಿಕಾರಿ ಆಶಿಷ್ ಇಶ್ವರ್ ಪಾಟೀಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಸೋಂಕರ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ದುರಂತ ಹೇಗೆ ಸಂಭವಿಸಿತು ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕುಸಿತ ಸಂಭವಿಸುವ ಮೊದಲು ಕ್ವಾರಿಯಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. ಮೃತರಲ್ಲಿ ಒಬ್ಬ ವ್ಯಕ್ತಿ ಬಾಲಸೋರ್ ಜಿಲ್ಲೆಗೆ ಸೇರಿದವನಾಗಿದ್ದರೆ, ಇನ್ನೊಬ್ಬ ಮಯೂರ್ಭಂಜ್ ಜಿಲ್ಲೆಯವನು. ಅವರ ಗುರುತುಗಳು ಇನ್ನೂ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಆಶಿಶ್ ಪಾಟೀಲ್ ಹೇಳಿದ್ದಾರೆ.
ಗಣಿಗಾರಿಕೆ ಪರವಾನಗಿ ಅವಧಿ ಸೆಪ್ಟೆಂಬರ್ 2025 ರಲ್ಲಿ ಮುಕ್ತಾಯಗೊಂಡಿದ್ದು, ಗುತ್ತಿಗೆ ಅವಧಿ ಡಿಸೆಂಬರ್‌ನಲ್ಲಿ ಕೊನೆಗೊಂಡಿದೆ. ಗುತ್ತಿಗೆ ಅವಧಿ ಮುಗಿದ ನಂತರವೂ ಗಣಿಗಾರಿಕೆ ಮುಂದುವರಿದಿರುವುದರಿಂದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


