Wednesday, February 25, 2026
Menu

ಒಬ್ಬರ ಪ್ರಾಣಕ್ಕಾಗಿ ಏಳು ಲಕ್ಷ ನೀಡಿ ಪಡೆದ ಏರ್ ಆಂಬ್ಯುಲೆನ್ಸ್‌ ಅಪಘಾತದಲ್ಲಿ ಏಳು ಜನ ಸಾವು

ಜಾರ್ಖಂಡ್​​ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಒಂದು ಜೀವ ಉಳಿಸುವುದಕ್ಕಾಗಿ ಕುಟುಂಬ ಆಂಬ್ಯುಲೆನ್ಸ್​ಗೆ ಏಳು ಲಕ್ಷ ರೂ. ಪಾವತಿ ಮಾಡಿತ್ತು. ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲನ್ನೂ ಕೂಡ ಮಾಡಿತ್ತು ಎನ್ನಲಾಗಿದೆ. ಆದರೆ ಅದೇ ಆಂಬ್ಯುಲೆನ್ಸ್ ಅಪಘಾತಗೊಂಡು ಏಳು ಜನ ಅಸು ನೀಗುವಂತಾಗಿದೆ.

ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಜಯ್ ಶಾ ಎಂಬವರ ದೇಹದ ಶೇ.65 ಭಾಗ ಸುಟ್ಟು ಹೋಗಿತ್ತು. ಚಿಕಿತ್ಸೆಗಾಗಿ ಅವರನ್ನು ಹೊತ್ತುಕೊಂಡು ಆಂಬ್ಯುಲೆನ್ಸ್ ದೆಹಲಿಯತ್ತ ಹೊರಟಿತ್ತು. ಸಂಜಯ್ ಜೊತೆ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್ ಇದ್ದರು. ಎಲ್ಲರೂ ಅಪಘಾತದಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ.

ರೆಡ್‌ಬರ್ಡ್ ಏರ್‌ವೇಸ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ 90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ ಹೊರಟಿತ್ತು. 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಹವಾಮಾನ ವೈಪರೀತ್ಯದಿಂದ ವಿಮಾನ ಚತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತ್ತು.

ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಂದ್ವಾದಲ್ಲಿ ಸಂಜಯ್ ಹೋಟೆಲ್ ನಡೆಸುತ್ತಿದ್ದರು. ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಸಂಜಯ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರು.ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರು. ಸ್ಥಿತಿ ಸುಧಾರಿಸದಿದ್ದಾಗ ವೈದ್ಯರು ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.

ಸಂಜಯ್ ಅವರ ಈ ಸ್ಥಿತಿಯಿಂದಾಗಿ ರಸ್ತೆ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ಕುಟುಂಬವು ಸಂಬಂಧಿಕರನ್ನು ಸಂಪರ್ಕಿಸಿ ಏರ್ ಆಂಬ್ಯುಲೆನ್ಸ್‌ಗಾಗಿ 7.5 ಲಕ್ಷ ರೂ. ಸಾಲವಾಗಿ ಪಡೆದುಕೊಂಡು ದೆಹಲಿಯಲ್ಲಿ ಚಿಕಿತ್ಸೆಗಾಗಿ ಹಣ ಹೊಂದಿಸಿದ್ದರು. ಸಂಜಯ್ ಅವರ ಅಣ್ಣ ವಿಜಯ್ ಶಾ ರಾಂಚಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಹೋಗಿದ್ದರು.

ಸಂಜಯ್‌ ದಂಪತಿ ಇಬ್ಬರೂ ಮೃತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಡಾ. ವಿಕಾಸ್ ಕುಮಾರ್ ಗುಪ್ತಾ ಅವರ ತಂದೆ ಬಜರಂಗಿ ಪ್ರಸಾದ್ ಮಗನನ್ನು ವೈದ್ಯನನ್ನಾಗಿ ಮಾಡಲು ತಮ್ಮ ಎಲ್ಲಾ ಭೂಮಿಯನ್ನು ಮಾರಿದ್ದರು ಎಂದು ತಿಳಿದುಬಂದಿದೆ.

 

Related Posts

Leave a Reply

Your email address will not be published. Required fields are marked *