ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ ವಿಜಯಪುರದಲ್ಲಿ ಬಿಜೆಪಿಯ ನಾನಾ ಘಟಕಗಳ ಪದಾಧಿಕಾರಿಗಳ ರಾಜೀನಾಮೆ ಪರ್ವ ಆರಂಭಗೊಂಡಿದೆ.
ಬಿಜೆಪಿ ನಗರ ಮಂಡಲ ಎಸ್‌ಟಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ನಾಟೀಕಾರ ರಾಜೀನಾಮೆ ನೀಡಿದ್ದು, ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಚು ಬಿರಾದಾರ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಶಂಕರ್ ಹೂಗಾರ್, ನಗರ ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ನಂದು ಗಡಗಿ, ನಗರ ಮಂಡಲ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ಭೀಮು ಮಾಶ್ಯಾಳ, ಒಬಿಸಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪಿಂಟು ಚೋರಗಿ, ನಗರ ಮಂಡಲ ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಗೊಳಸಂಗಿ, ನಗರ ಮಂಡಲ ಕಾರ್ಯಾಲಯ ಕಾರ್ಯದರ್ಶಿ ಸ್ಥಾನಕ್ಕೆ ಅಮೀತ ಗರುಡಕರ ರಾಜೀನಾಮೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ: ಯತ್ನಾಳ ಪ್ರಾಮಾಣಿಕ ರಾಜಕಾರಣಿ, ನೇರ, ನಿಷ್ಠುರವಾದಿ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದವರು, ನೇರವಾಗಿ ಮಾತನಾಡುವ ಏಕೈಕ ವ್ಯಕ್ತಿ ಯತ್ನಾಳ. ಅವರ ಉಚ್ಚಾಟನೆಯನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತದೆ, ಉತ್ತರ ಕರ್ನಾಟಕ ಜನ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಕುಟುಂಬ ರಾಜಕಾರಣ ಬೇಡ ಅಂತಾ ಬಿಜೆಪಿ ಹೇಳುತ್ತದೆ, ಭ್ರಷ್ಟಾಚಾರ ವಿರೋಧಿ ಅಂತ ಹೇಳುತ್ತದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ವಿರುದ್ಧ ಮಾತನಾಡಿದ್ದು ತಪ್ಪು ಎನ್ನುವುದು ಎಷ್ಟು ಸರಿ, ಯತ್ನಾಳ ಅನ್ಯಾಯಗಳ ವಿರುದ್ಧ ಮಾತನಾಡಿದ್ದಾರೆ. ಅವರ ಉಚ್ಚಾಟನೆಯಿಂದ ಪಂಚಮಸಾಲಿ ಸಮಾಜಕ್ಕೆ ಅಸಮಾಧಾನ ಆಗಿದೆ. ಇದು ಬಿಜೆಪಿಗೆ ದೊಡ್ಡ ಹಿನ್ನಡೆ ಎಂದಿದ್ದಾರೆ.