ಈ ಶಿಕ್ಷಣ ಕ್ಷೇತ್ರದಲ್ಲಿ ’ಪರೀಕ್ಷೆ’ ಎನ್ನುವುದೇ ಕೇಂದ್ರಬಿಂದು. ಪರೀಕ್ಷೆಯನ್ನು ಬಿಟ್ಟು ಈ ಶಿಕ್ಷಣ ವ್ಯವಸ್ಥೆಯನ್ನು ಊಹಿಸಲು ಆಸಾಧ್ಯ. ಒಂದು ಅರ್ಥದಲ್ಲಿ ’ಶಿಕ್ಷಣ’ ಎಂದರೆ ಓದು, ಪರೀಕ್ಷೆ ಬರೆ ಎಂಬಂತಾಗಿದೆ. ಪ್ರತಿ ಮಗುವಿನ ಬುದ್ದಿವಂತಿಕೆಯನ್ನು ಅವರು ಗಳಿಸುವ ಅಂಕಗಳ ಮೂಲಕ ಗುರುತಿಸಲಾಗುತ್ತದೆ. ಒಂದು ವಾರದಲ್ಲಿ ಓದಿದನ್ನು ಅರ್ಧ-ಮುಕ್ಕಾಲು ಘಂಟೆಯಲ್ಲಿ, ಒಂದು ವರ್ಷದಲ್ಲಿ ಓದಿದನ್ನು ಮೂರು ಗಂಟೆಯ ಮಿತಿಯಲ್ಲಿ ಬರೆದು ಮುಗಿಸಬೇಕು. ಇದು ಇಂದಿನ ಶಾಲಾ ಪರೀಕ್ಷೆಗಳ ಚಿತ್ರಣ. ಅದೆಷ್ಟೋ ಸಲ ಪರೀಕ್ಷಾ ಪದ್ಧತಿಯನ್ನು ಸುಧಾರಣೆ ಮಾಡಬೇಕು ಎಂಬ ಮಾತು ಬಂದಾಗ, ಪ್ರಶ್ನೆ ಪತ್ರಿಕೆಗಳ ಸ್ವರೂಪವು ಬಹು ಆಯ್ಕೆ, ಹೊಂದಿಸುವಿಕೆ, ಬಿಟ್ಟ ಸ್ಥಳ ತುಂಬುವಿಕೆ, ಸಣ್ಣ ಉತ್ತರ ಮತ್ತು ವಿವರಣಾತ್ಮಕ ಮಾದರಿ ಪ್ರಶ್ನೆಗಳನ್ನು ಸುಲಭ, ಕ್ಲಿಷ್ಟ, ಮತ್ತು ಸಾಮಾನ್ಯ ಎಂಬುದಾಗಿ ನೀಡಿರುವುದರಿಂದ ಮಕ್ಕಳಿಗೆ ಸುಲಭವಾಗಿ ಉತ್ತರ ಬರೆಯಲು ಸಹಾಯಕವಾಗಲಿದೆ ಎಂದು ಸುಧಾರಣೆಯ ಮಾತಿನಿಂದ ನಮ್ಮ ಬಾಯಿ ಮುಚ್ಚಿಸಿ ಬಿಡುತ್ತಾರೆ. ಇನ್ನೂ ಎಸ್.ಎಸ್.ಎಲ್.ಸಿ ಪರೀಕ್ಷೆಯಂತೂ ದೊಡ್ಡ ಪೆಡಂಭೂತವಾಗಿ ಮಾರ್ಪಟ್ಟಿದೆ. ಮಕ್ಕಳಿಗೆ ಪರೀಕ್ಷೆ ನಡೆಸುವ ಮಂಡಳಿಗಳು ತಮ್ಮ ರಾಜ್ಯಕ್ಕೆ ಅಥವಾ ನಮ್ಮ ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕು ಎಂಬ ಹುಚ್ಚು ಬಯಕೆಯಿಂದ ಮಕ್ಕಳು ಬರೆದು ಬರೆದು ಅಭ್ಯಾಸ ಮಾಡಬೇಕು ಎಂಬ ದೃಷ್ಟಿಕೋನದಿಂದ ಸರಣಿ ಪರೀಕ್ಷೆಗಳನ್ನು ಮಾಡಲು ಮುಂದಾಗುತ್ತವೆ. ಇಲ್ಲಿ ತಮಾಷೆಯ ವಿಷಯವೆಂದರೆ ಕಲಿಕೆಯಲ್ಲಿ ಪರೀಕ್ಷೆ ಬರೆಯುವವರು ವಿದ್ಯಾರ್ಥಿಗಳು, ಆದರೆ ಅವನ/ಳ ಮಾತು, ಮನಸ್ಥಿತಿಯನ್ನು ಕೇಳಲು ಯಾರು ತಯಾರಿಲ್ಲ !
ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳ ಕಲಿಕೆಯನ್ನು ಆಗ್ಗಿಂದಾಗೆ ಪರೀಕ್ಷಿಸಬೇಕು. ಹಾಗದರೆ ಮಾತ್ರ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುತ್ತವೆ. ಹೀಗೆ ಅಭ್ಯಾಸ ಮುಂದವರಿದರೆ ಮುಂದೆ ಹತ್ತನೆಯ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಉತ್ತಮ ದರ್ಜೆ ಅಂಕಗಳು ಬರುತ್ತವೆ ಎಂದು ಅಂದಾಜಿಸಲಾಗಿದೆ. ಈಗ ವಾಸ್ತವವನ್ನು ಮನೋವೈಜ್ಞಾನಿಕ ಹಿನ್ನಲೆಯಲ್ಲಿ ವಿಶ್ಲೇಷಿಸಬೇಕಿದೆ ಮತ್ತು ಅದು ಅತಿ ಅಗತ್ಯವಾಗಿದೆ ಕೂಡ. ಮೊದಲಿಗೆ ಮಕ್ಕಳಿಗೆ ಪರೀಕ್ಷೆಯ ಬಗೆಗಿನ ಆಸಕ್ತಿಯಿಲ್ಲ. ಇದರ ಅನುಭವ ನಮಗೆ ಆಗಬೇಕೆಂದರೆ ತರಗತಿಯಲ್ಲಿ ಈಗಗಾಲೇ ನಿರ್ಧರಿತವಾಗಿರುವ ಪರೀಕ್ಷೆಯನ್ನು ಒಮ್ಮೆ ವಿಷಯ ಶಿಕ್ಷಕರು ’ಇಂದು ಪರೀಕ್ಷೆ ಇಲ್ಲ. ನಾಳೆ ಪರೀಕ್ಷೆ ಮಾಡುತ್ತೇನೆ’ ಎಂದು ಹೇಳಿದರೆ ತರಗತಿಯ ವಿದ್ಯಾರ್ಥಿಗಳ ಮುಖದಲ್ಲಿ ಮೂಡುವ ಖುಷಿಯಲ್ಲಿಯೇ ಪರೀಕ್ಷೆ ಅನ್ನುವುದು ಮಕ್ಕಳನ್ನು ಹೇಗೆ ಒತ್ತಡದಲ್ಲಿ ಇರಿಸಿದೆ ಎಂಬುದನ್ನು ತಿಳಿಸುತ್ತದೆ.
’ಪರೀಕ್ಷೆ’ಗಳು ಮಕ್ಕಳಿಗೆ ಯಾಕೆ ಇಷ್ಟವಿಲ್ಲ ? ಮಕ್ಕಳು ವಿಷಯಗಳನ್ನು ಅರಿತುಕೊಂಡಿದ್ದರೂ, ಇದು ಮಗುವಿನ ನೆನಪು ಮತ್ತು ಜ್ಞಾನದ ಮೇಲೆ ಕೇಂದ್ರಿತವಾಗಿರುವುದರಿಂದ ಇವು ಅನಗತ್ಯವಾಗಿ ಒತ್ತಡದಿಂದ ಕೂಡಿರುತ್ತವೆ. ತರಗತಿಯಲ್ಲಿ ನಡೆಯುವ ಪರೀಕ್ಷೆಗಳನ್ನು ಎಲ್ಲಾ ಮಕ್ಕಳಿಗೂ ಒಂದೇ ರೀತಿಯಲ್ಲಿ ನಡೆಸಲಾಗುತ್ತದೆ. ಇದೊಂದು ಸಾಮಾನ್ಯ ಕಲಿಕಾ ಪ್ರಕ್ರಿಯೆಯಾಗಿದೆ ಹಾಗೂ ಎಲ್ಲಾ ಮಕ್ಕಳಿಂದ ಉತ್ತಮ ಅಂಕಗಳನ್ನು ನಿರೀಕ್ಷಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ, ಅದು ಬೋಧನೆ ಪಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಭಾವಿಸಲಾಗುತ್ತದೆ. ಅಂದರೆ ಪರೋಕ್ಷವಾಗಿ ಶಿಕ್ಷಕ ಸರಿಯಾಗಿ ಪಾಠ ಮಾಡಿಲ್ಲ ಎಂದರ್ಥ. ಹಾಗದಾರೆ, ಅದೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿ ಉತ್ತಮ ಅಂಕ ಗಳಿಸಿದ್ದು ಹೇಗೆ ? ಅವರಿಗೆ ಮಾತ್ರ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಮಾಡಿದರೇ ? ಎನ್ನುವ ಪ್ರಶ್ನೆ ಯಾರ ಬಳಿಯೂ ಉತ್ತರ ಇಲ್ಲ. ಮುಂದುವರಿದು ಕೆಲವರು ಆ ವಿದ್ಯಾರ್ಥಿಗಳು ಇಂಟಲಿಜೆಂಟ್ ವಿದ್ಯಾರ್ಥಿಗಳು ಎಂದು ಹೇಳಿ ಶಿಕ್ಷಕರ ಶ್ರಮಕ್ಕೆ ತಿಲಾಂಜಲಿ ಇಟ್ಟು ಬಿಡುತ್ತಾರೆ. ಒಂದು ವೇಳೆ ತರಗತಿಯಲ್ಲಿ ಇಂಟಲಿಜೆನ್ಸ್ ವಿದ್ಯಾರ್ಥಿಗಳು ಇದ್ದ ಹಾಗೇ ’ನಿಧಾನ ಕಲಿಕಾ ವಿದ್ಯಾರ್ಥಿಗಳು’ ಸಹ ಇರುತ್ತಾರೆ ಅಲ್ಲವೇ ? ಈ ವಿಷಯಕ್ಕೆ ಒತ್ತು ಇಲ್ಲದಿರುವುದು ನಮ್ಮ ನಮ್ಮ ಶಿಕ್ಷಣ ವ್ಯವಸ್ಥೆಯ ದೊಡ್ಡ ದುರಂತವಾಗಿದೆ. ಒಂದು ವೇಳೆ ಎಲ್ಲಾ ಮಕ್ಕಳು ಓದುತ್ತಾರೆ, ಪಾಸಾಗುತ್ತಾರೆ ಎಂದಾದರೆ ಪರೀಕ್ಷೆಯಲ್ಲಿ ’ಅನುತ್ತೀರ್ಣ’ ಎನ್ನುವ ಪದ್ಧತಿಯೇ ಇರುತ್ತಿರಲಿಲ್ಲ !
ಇಂದಿನ ಪರೀಕ್ಷೆಯ ಪದ್ಧತಿ ಹೇಗಿದೆ ಎಂದರೆ ಆನೆ, ಮೀನು, ಕೋತಿ, ಕಾಗೆ, ಪೆಂಗ್ವಿನ್, ನಾಯಿಗೆ ಮರ ಹತ್ತುವ ಪರೀಕ್ಷೆ ಎರ್ಪಡಿಸಿದಂತಿದೆ. ಈ ಪ್ರತಿ ಪ್ರಾಣಿಗಳ ಸಾಮರ್ಥ್ಯಗಳು ಬೇರೆ ಬೇರೆಯಾಗಿವೆ. ಆದೇ ರೀತಿ ತರಗತಿಯಲ್ಲಿ ಬೇರೆ ಬೇರೆ ಸಾಮರ್ಥ್ಯವಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಥವಾ ಕಲಿಕೆಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಲೇಬೇಕು ಎನ್ನುವುದು ಮನೋವೈಜ್ಞಾನಿಕವಾಗಿ ಸಾಧುವಾದುದ್ದೇ ? ಎಂಬುದನ್ನು ಮನನ ಮಾಡಿಕೊಳ್ಳಲೇಬೇಕು. ಮನೋವೈಜ್ಞಾನಿಕ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಆಲ್ಬರ್ಟ್ ಐನ್‌ಸ್ಟೈನ್‌ರವರು, “ಎಲ್ಲರೂ ಪ್ರತಿಭಾನ್ವಿತರೇ. ಆದರೆ ನೀವು ಮೀನನ್ನು ಮರ ಹತ್ತುವ ಸಾಮರ್ಥ್ಯದಿಂದ ನಿರ್ಣಯಿಸಿದರೆ, ಅದು ತನ್ನ ಇಡೀ ಜೀವನವನ್ನು ತಾನು ಮೂರ್ಖನೆಂದು ನಂಬಿಕೊಂಡು ಬದುಕುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ತರಗತಿಯಲ್ಲಿ ಸರಣಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಕಷ್ಟಕರ. ಏಕೆಂದರೆ ಮೊದಲನೆಯದಾಗಿ, ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರಿಲ್ಲ. ಮಾನವಿಯತೆಯ ಆಧಾರದಲ್ಲಿ ಲಭ್ಯವಿರುವ ಶಿಕ್ಷಕರೇ ಮಕ್ಕಳಿಗೆ ಆನ್ಯಾಯವಾಗುತ್ತದೆ ಎಂದು ತಾನು ಅಧ್ಯಯನ ಮಾಡಿರದ ವಿಷಯಗಳನ್ನು ಸಹ ಬೋಧಿಸುತ್ತಿರುತ್ತಾರೆ. ಈ ಸರಣಿ ಪರೀಕ್ಷೆಗಳಿಂದ ಮಾನವಿಯತೆಯೇ ಅವರಿಗೆ ಮುಳುವಾಗಿ ಪರಿಣಮಿಸುತ್ತಾರೆ. ಇನ್ನೂ ಸರಣಿ ಪರೀಕ್ಷೆಯಿಂದ ವಿದ್ಯಾರ್ಥಿಗಳು ಪರೀಕ್ಷೆಯ ಗುಂಗಿನಲ್ಲಿಯೇ ಇರುತ್ತಾರೆಯೇ ವಿನಾಃ ಸಹ ಪಠ್ಯ ಚಟುವಟಿಕೆಗಳಿಗೆ ಗಮನ ಕೊಡಲು ಸಾಧ್ಯವಿಲ್ಲ. ಸರಣಿ ಪರೀಕ್ಷೆಗಳು ಮಕ್ಕಳಿಗೆ ಬಾಯಿಪಾಠ ಪದ್ಧತಿಗೆ ದೂಡಿವೆ. ಇವು ಸೃಜನೆಶೀಲತೆಯನ್ನು ಉಂಟುಮಾಡುವುದಿಲ್ಲ. ಇನ್ನೂ ಪರೀಕ್ಷೆಗೆ ತಯಾರಾಗದ ವಿದ್ಯಾಥಿಗಳು ಪರೀಕ್ಷೆಯಂದೆ ಪದೇ ಪೆದೇ ರಜೆ ಮಾಡುವುದರಿಂದ ಶಿಕ್ಷಕರು ಪ್ರತಿ ದಿನ ಪರೀಕ್ಷೆ ಮಾಡುವುದರಲ್ಲಿಯೇ ನಿರತರಾಗಿರಬೇಕಾಗುತ್ತದೆ. ಪರೀಕ್ಷೆಯನ್ನು ಬರೆಯುವ ಒಂದೇ ತರಗತಿಯ ಒಂದೇ ವಯಸ್ಸಿನ ವಿದ್ಯಾರ್ಥಿಗಳಲ್ಲಿ ವ್ಯಕ್ತಿ ಭಿನ್ನತೆಗಳಿವೆ. ಅವರ ಸಾಮಾಜಿಕ ಹಿನ್ನಲೆ, ಬಳಸುವ ಭಾಷೆ ಪ್ರಾವೀಣ್ಯತೆ, ವಿಭಿನ್ನ ಕಲಿಕೆ ಮತ್ತು ಆಲೋಚನಾ ಶೈಲಿಗಳು, ವಿಭಿನ್ನ ಕುಟುಂಬ ಹಿನ್ನಲೆಯ ಜೊತೆ ಮನೋವೈಜ್ಞಾನಿಕ ಅಂಶಗಳಾದ ಅನುವಂಶಿಯತೆ, ಕಲಿಕಾ ಭಿನ್ನತೆ, ವ್ಯೆಕ್ತಿ ಭಿನ್ನತೆ, ಬುದ್ಧಿಶಕ್ತಿ, ಸೃಜನಶೀಲತೆ, ಸ್ಮರಣೆ, ಮರೆವು, ತಿಳುವಳಿಕೆಯ ಮೇಲೆ ಅವಲಂಬಿಸುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದರಿಂದ ಸಹಜವಾಗಿ ಫಲಿತಾಂಶಗಳಲ್ಲಿ ಭಿನ್ನತೆ ಇದ್ದೇ ಇರುತ್ತದೆ. ಈ ಹಿನ್ನಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಅನುತೀರ್ಣ ಆಗಿಯೇ ಆಗುತ್ತಾರೆ. ಇವುಗಳನ್ನು ಗ್ರಹಿಸಿಕೊಂಡು ನಾವು ಶಿಕ್ಷಣ ನೀಡಲು ಮುಂದಾಗಬೇಕು. ಅದನ್ನು ಬಿಟ್ಟು ಅನುತೀರ್ಣತೆಯನ್ನು ತಪ್ಪಿಸಲು ನಾವು ಸರಣಿ ಪರೀಕ್ಷೆಗಳನ್ನು ಮಾಡುತ್ತೇವೆ ಎಂದರೆ ಅದು ನೂರಕ್ಕೆ ನೂರರಷ್ಟು ಅಪ್ರಸ್ತುತ.
ಎನ್.ಸಿ.ಎಫ್ ೨೦೦೫ ಎಲ್ಲಿಯವರೆಗೆ ಪರೀಕ್ಷೆಗಳು ಮತ್ತು ಕಿರು ಪರೀಕ್ಷೆಗಳು ಮಕ್ಕಳ ಜ್ಞಾಪಕ ಶಕ್ತಿ ಮತ್ತು ಪಠ್ಯಪುಸ್ತಕದ ಜ್ಞಾನವನ್ನು ಮರುಸೆಳೆಯುವುದನ್ನು ಮಾತ್ರ ಅಳೆಯುತ್ತವೆಯೋ ಅಲ್ಲಿಯವರೆಗೆ ಪಠ್ಯಕ್ರಮವನ್ನು ಕಲಿಕೆಯತ್ತ ನಿರ್ದೇಸುವ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತದೆ.’ ಎಂದು ಪರೀಕ್ಷೆಗಳ ಬಗ್ಗೆ ತಿಳಿಸದೆ. ಆರ್.ಟಿ.ಇ ಕಾಯಿದೆ ೨೦೦೯ರ ಸೆಕ್ಷನ್ ೨೯ (ಎಚ್)ರಂತೆ ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಸಾಮರ್ಥಗಳಲ್ಲಿ ಮಕ್ಕಳ ಪ್ರಗತಿ ಸಮಗ್ರ ಹಾಗೂ ನಿರಂತರ ಮೌಲ್ಯ ನಿರ್ಧರಣೆ ಮಾಡಬೇಕು ಎಂದಿದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಲಿಖಿತ ಪರೀಕ್ಷೆ (ಪೆನ್ನು,ಪೇಪರ್ ಗೆ ಸೀಮಿತಗೊಂಡ) ಒತ್ತಡವನ್ನು ಕಡಿಮೆ ಮಾಡಬೇಕು. ಪರೀಕ್ಷೆ ಎಂಬ ಭಯವನ್ನು ಮತ್ತು ಆತಂಕವನ್ನು ಹೋಗಲಾಡಿಸುವ ಮೂಲಕ ಕಲಿಕೆಯನ್ನು ನಿರಂತರವಾಗಿ ಅವಲೋಕನಕ್ಕೆ ಒಳಪಡಿಸುವುದು ಎಂದಿದೆ. ಸಿಸಿಇಯ ಪ್ರಕಾರ ರೂಪಾಣಾತ್ಮಕ ಮೌಲ್ಯಮಾಪನವು ಚಟುವಟಿಕೆಗಳನ್ನು ಹೊಂದಿದ್ದು, ಮಗುವಿನ ಕಲಿಕಾ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿರುತ್ತದೆ. ಆದರೆ ಸರಣಿ ಪರೀಕ್ಷೆಗಳು ಸಿಸಿಇಯ ಮೂಲ ಉದ್ದೇಶ ಮತ್ತು ಕಾಯಿದೆಗೆ ವಿರುದ್ಧವಾಗಿದೆ.
ಸರಣಿ ಪರೀಕ್ಷೆಗಳು ನಿಷ್ಪ್ರಯೋಜಕ ಏಕೆಂದರೆ ಒಂದು ವಿದ್ಯಾರ್ಥಿಯು ನಿಗಧಿಪಡಿಸಿ ಸಮಯದಲ್ಲಿ ಉತ್ತರ ಬರೆಯಲು ಬಳಸುವ ಸಮಯದಲ್ಲಿ ಬೇರೆ ಹೊಸತನವನ್ನು ಚಿಂತಿಸಲು ಸಾಧ್ಯವಿಲ್ಲ. ತಾನು ಬಾಯಿಪಾಠ ಕಲಿತದನ್ನು ವಾಂತಿ ಮಾಡುವಂತೆ ಪರೀಕ್ಷೆ ಪತ್ರಿಕೆಯಲ್ಲಿ ಬರೆಯುವ ಯಾಂತ್ರಿಕ ಕೆಲಸವಷ್ಟೇ ಆಗುತ್ತದೆ. ಕಲಿಕೆಯಲ್ಲಿ ಹೊಸ ಆಸಕ್ತಿಯನ್ನು ಉಂಟು ಮಾಡುವ ಯಾವುದೇ ಕ್ರಿಯೆ ನಡೆಯುವುದಿಲ್ಲ. ಪರೀಕ್ಷೆಯಿಂದ ಮಕ್ಕಳ ಮೇಲಾಗುವ ಒತ್ತಡವನ್ನು ತಪ್ಪಿಸಲು ಕಿರು ಪರೀಕ್ಷೆಗಳಿಗೆ ಒತ್ತು ನೀಡಬೇಕು. ನಿರಂತರ ಮೌಲ್ಯಮಾಪನವನ್ನು ಚಟುವಟಿಕೆಗಳ ಮೂಲಕ ನಡೆಸಬೇಕು.
ಈ ಹಿಂದೆ ಇಲಾಖೆ ೫,೮,೯ನೆ ತರಗತಿಗಳ ಬೋರ್ಡ ಪರೀಕ್ಷೆಯನ್ನು ನಡೆಸಿದ ವಿಚಾರವಾಗಿ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ನ್ಯಾ.ಬೇಲಾ ಎಂ ತ್ರಿವೇದಿ ಮತ್ತು ನ್ಯಾ ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠ ’ವಿದ್ಯಾರ್ಥಿಗಳಿಗೆ ಏಕೆ ಕಿರುಕುಳ ನೀಡುತ್ತಿದ್ದೀರಿ? ಸರಕಾರ ಈ ರೀತಿ ವರ್ತಿಸಬಾರದು, ಇದನ್ನು ಸ್ವಯಂ ಪ್ರತಿ?ಯ ವಿ?ಯವಾಗಿಸಬೇಡಿ. ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ’ ಎಂದು ನ್ಯಾಯಪೀಠ ಕಿವಿ ಮಾತು ಹೇಳಿತು. ಆದ್ದರಿಂದ ಸರಣಿ ಪರೀಕ್ಷೆಗಳನ್ನು ನಡೆಸುವ ಬದಲು ಈ ಹಿಂದೆ ಇದ್ದಂತೆ ಸಿಸಿಇ ಪದ್ಧತೆಯಲ್ಲೇ ಮೌಲ್ಯಮಾಪನ ನಡೆಸಿ ಮಕ್ಕಳ ಒತ್ತಡವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಆರ್.ಟಿ.ಇ ಕಾಯಿದೆಯ ಪ್ರಕಾರ ಮಾನ್ಯವಾಗಿದೆ.