ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಗಂಡನೇ ಚಾಕುವಿನಿಂದ ಇರಿದಿದ್ದಾನೆ. ಶ್ರುತಿ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅವರು 20 ವರ್ಷದ ಹಿಂದೆ ಅಮರೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ.
ಗಂಡನಿಂದ ದೂರಾಗಿ ಶ್ರುತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾದಾಗ ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಜಗಳ ನಡೆದಿತ್ತು. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು.
ಕಳೆದ ಗುರುವಾರ ಗಂಡ-ಹೆಂಡತಿ ರಾಜಿಯಾಗಿ ಒಂದಾಗಿದ್ದರು. ಮಾರನೇ ದಿನವೇ ಶುಕ್ರವಾರ ಮಕ್ಕಳಿಬ್ಬರು ಕಾಲೇಜಿಗೆ ಹೋದ ನಂತರ ಹೆಂಡತಿಯ ಮೇಲೆ ಹಲ್ಲೆ ಅಮರೇಶ್ ಹಲ್ಲೆ ನಡೆಸಿದ್ದಾನೆ. ಪೆಪ್ಪರ್ ಸ್ಪ್ರೇ ಹೊಡೆದು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಮರೇಶ್‌ನನ್ನು ಬಂಧಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರುತಿ ಗಂಡನಿಂದ ದೂರವಾಗಿ ಅಣ್ಣ ರವಿ ಅವರ ಮನೆಯಲ್ಲಿ ವಾಸವಿದ್ದಾಗ ಅಮರೇಶ್ ಲೀಸ್ ಹಣ ಹಾಗೂ ಒಡವೆಗಳನ್ನು ನೀಡುವಂತೆ ಪೀಡಿಸುತ್ತಿದ್ದ. ಕೆಲವು ದಿನಗಳ ಹಿಂದೆ ಕೊಲೆ ಮಾಡುತ್ತೇನೆ ಎಂದೂ ಬೆದರಿಸಿದ್ದ. ಮೂರು ದಿನಗಳ ಹಿಂದೆ ಅಣ್ಣನಿಗೆ ಕರೆ ಮಾಡಿ ರಾಜಿ ಮಾಡಿಕೊಂಡಿದ್ದ. ಇದರಿಂದಾಗಿ ನಾನು ಮನೆಗೆ ಬಂದಿದ್ದೆ. ಮರುದಿನ ಮಕ್ಕಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಮನೆಯಿಂದ ಹೊರಟಿದ್ದ. ಮಧ್ಯಾಹ್ನ ವಾಪಾಸ್ ಆಗಿಮನೆಯ ಡೋರ್ ತೆಗೆದ ಕೂಡಲೇ ಪೆಪ್ಪರ್ ಸ್ಪ್ರೇ ಮುಖಕ್ಕೆ ಹೊಡೆದು ಚಾಕುವಿನಿಂದ ಚುಚ್ಚಲು ಪ್ರಯತ್ನ ಮಾಡಿದ್ದ. ಹಿಟ್ಟಿನ ಕೋಲಿನಿಂದ ಹೊಡೆದು, ಜುಟ್ಟು ಹಿಡಿದು ಎಳೆದಾಡಿ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ನಾನು ಕೂಗಾಡುವ ಶಬ್ದ ಕೇಳಿ ಪಕ್ಕದ ಮನೆಯವರು ಬಂದು ಆತನನ್ನು ತಡೆದಿದ್ದಾರೆ ಎಂದು ಶ್ರುತಿ ದೂರಿನಲ್ಲಿ ವಿವರಿಸಿದ್ದಾರೆ.