Menu

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ  ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ:  ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರೇ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಬಹುತೇಕ ಯುವಕರು ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಈ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ. ರಾತ್ರಿ 7-8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ” ಎಂದರು.

ಈ ಮಧ್ಯೆ ರಾತ್ರಿ 8ರ ನಂತರ ಏನು ಮಾಡಬೇಕು ಎಂದು ನೀವೇ ಸಲಹೆ ನೀಡಿ ಶಾಸಕ ಅರವಿಂದ್ ಬೆಲ್ಲದ್ ಅವರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ರಾತ್ರಿ 7-8 ಗಂಟೆ ನಂತರ ಮಂಗಳೂರು ಸ್ಥಬ್ಧವಾಗಿದೆ ಎಂದರೆ ಮಂಗಳೂರಿನ ಜನ ಹೆಚ್ಚಾಗಿ ಮನೆಯಿಂದಾಚೆ ಬರುವುದಿಲ್ಲ. ಹೀಗಾದರೆ ಯಾವ ಆರ್ಥಿಕ ವಹಿವಾಟು ನಡೆಯುತ್ತದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಐಟಿ ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಿತು. ಆದರೆ ಅಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಕೂಡ ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ? ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಕೂತು ಚರ್ಚೆ ಮಾಡಿ. ಈ ವಿಚಾರವಾಗಿ ನಾನು ಹಾಗೂ ಪ್ರವಾಸೋದ್ಯಮ ಸಚಿವರಿಬ್ಬರೂ ಸೇರಿ ಜಿಲ್ಲೆಯ ಎಲ್ಲಾ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ಮಾಡುತ್ತೇವೆ” ಎಂದು ತಿಳಿಸಿದರು.

ಅರಗ ಅವರು ಗೃಹ ಸಚಿವರಾಗಿದ್ದಾಗ ಎಷ್ಟು ಅಕ್ರಮ ಮದ್ಯದಂಗಡಿ ಬಂದ್ ಮಾಡಿಸಿದ್ದರು:

ಕಾಂಗ್ರೆಸ್ ಶಾಸಕ ಕೌಜಲಗಿ ಮಾಹಂತೇಶ್ ಅವರು ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಇವುಗಳನ್ನು ತಡೆಹಿಡಿಯುವ ಕಾರ್ಯದ ಬಗ್ಗೆ ಪ್ರಶ್ನೆ ಎತ್ತಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು ಹಳ್ಳಿಗಳಲ್ಲಿ ಎಸ್ ಸಿ, ಎಸ್ ಟಿ ಕಾಲೋನಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿಚಾರ ಪ್ರಸ್ತಾಪಿಸಿದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಅರಗ ಜ್ಞಾನೇಂದ್ರ ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳುತ್ತಿದ್ದಾರೆ. ರಾಜ್ಯಪಾಲರ ಮೇಲಿನ ಭಾಷಣದ ಬಗ್ಗೆ ಚರ್ಚೆ ವೇಳೆ ಈ ವಿಚಾರವನ್ನೂ ಚರ್ಚೆ ಮಾಡಲಿ. ಅವರು ಕೂಡ ರಾಜ್ಯದ ಗೃಹಮಂತ್ರಿಯಾಗಿದ್ದವರು, ಅವರ ಕಾಲದಲ್ಲಿ ಇಂತಹ ಎಷ್ಟು ಅಂಗಡಿಗಳನ್ನು ಮುಚ್ಚಿಸಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಲಿ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *