Thursday, December 18, 2025
Menu

ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು ಆರಂಭ: ಡಿಸಿಎಂ ಡಿಕೆ ಶಿವಕುಮಾರ್

ಬೆಳಗಾವಿ: “ನಮ್ಮಲ್ಲಿ ನಗರ ಯೋಜನೆ ರೂಪಿಸುತ್ತಿರುವವರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ (ಎರಡನೇ ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ ಸಚಿವ ಬೋಸರಾಜು ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಿದರು.

ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ತಿದ್ದುಪಡಿ ತರುತ್ತಿರುವ ಕಾರಣವನ್ನು ವಿವರಿಸಿದರು.

“ರಾಜ್ಯದಲ್ಲಿ ನಗರ ಯೋಜನೆ ರೂಪಿಸುವವರು (ಟೌನ್ ಪ್ಲಾನರ್ ಗಳು) ಕಡಿಮೆಯಾಗಿದ್ದಾರೆ. ನಗರ ಯೋಜನೆ ವಿಷಯದ ಕಾಲೇಜು ಆರಂಭಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ 100 ಕೋಟಿ ಹಣವನ್ನು ಮೀಸಲಿಡಲಾಗಿದೆ. ಈಗ ನಗರ ಯೋಜನೆಗಳನ್ನು ಸಿವಿಲ್ ಇಂಜಿನಿಯರ್ ಗಳ ಬದಲಾಗಿ ಬೇರೆ ಇಂಜಿನಿಯರ್ ಗಳು ನಮ್ಮ ಇಲಾಖೆಗೆ ಬಂದು ಸೇರುತ್ತಿದ್ದಾರೆ. ಕೆಂಪೇಗೌಡ ಯೋಜನಾ ಪ್ರಾಧಿಕಾರ ರಚಿಸಲಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆ ಇತ್ತು. ಬಿಜೆಪಿಯವರ ಕಾಲದಲ್ಲಿ ಅದನ್ನು ಕಂದಾಯ ಸಚಿವರ ಅಧ್ಯಕ್ಷತೆ ಮಾಡಿದ್ದರು.

ಈ ಪ್ರಾಧಿಕಾರಕ್ಕೆ ಬೆಂಗಳೂರಿನ ಸುಮ್ಮನಹಳ್ಳಿಯ ಬಳಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ನಗರ ಯೋಜನಾಕಾರರನ್ನು ತಯಾರಿಸಲು ವಿಟಿಯು ಜೊತೆ ಚರ್ಚೆ ಮಾಡಿ ಇದಕ್ಕಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲಿ ನಗರ ಯೋಜನೆ ರೂಪಿಸಲು ನೆರವಾಗುತ್ತದೆ. ಈ ಪ್ರಾಧಿಕಾರದಲ್ಲಿ ನಗರ ಯೋಜನೆ ಅಧಿಕಾರಿಗಳು ಹಾಗೂ ನಗರ ಯೋಜನೆ ನಿರ್ದೇಶಕರು ಸದಸ್ಯರಾಗಿರಬೇಕು ಎಂದು ಈ ತಿದ್ದುಪಡಿ ತರಲಾಗಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *