ಬೆಂಗಳೂರು: ಪರಸ್ಪರ ಕಾನೂನು ಹೋರಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಡಿ ಮುದ್ಗಿಲ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ಮತ್ತು ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸರ್ಕಾರ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತಡೆ ಹಾಕಲು ಮುಂದಾಗಿತ್ತು. ಇಬ್ಬರೂ ಅಧಿಕಾರಿಗಳಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕೃಷಿ ಇಲಾಖೆಯ (ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ) ಕಾರ್ಯದರ್ಶಿ ಹುದ್ದೆಯಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಎರಡು ವಾರ ಹಿಂದಷ್ಟೇ ಹೈಕೋರ್ಟ್ ಆದೇಶದ ಮೇರೆಗೆ ಮುಂಬಡ್ತಿ ನೀಡಲಾಗಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೊರ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ.
ರೂಪಾ ಮೌದ್ಗಿಲ್ ಪತಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಸಹ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ರೂಪಾ ಮೌದ್ಗಿಲ್ ವರ್ಗಾವಣೆಯಿಂದ ತೆರವಾದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಸ್ಥಾನಕ್ಕೆ ಡಿ. ಭಾರತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತ ಹುದ್ದೆಗೆ ಹೆಚ್. ಬಸವರಾಜೇಂದ್ರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.