ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರನ್ನು ಪೊಲೀಸರು ಉತ್ತರಪ್ರದೇಶದ ಆಗ್ರಾದಲ್ಲಿ ಬಂಧಿಸಿದ್ದಾರೆ.
ದೆಹಲಿ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯನಾಗಿರುವ ಆರೋಪಿ, ಪ್ರಕರಣ ಬಹಿರಂಗವಾದ ನಂತರ ತಲೆಮರೆಸಿಕೊಂಡಿದ್ದನು. ಇವನ ವಿರುದ್ಧ 2009 ಮತ್ತು 2016ರಲ್ಲಿ ಸಹ ಲೈಂಗಿಕ ಕಿರುಕುಳದ ದೂರುಗಳು ದಾಖಲಾಗಿದ್ದವು.
ಸ್ವಾಮೀಜಿ ಸ್ಕಾಲರ್‌ಶಿಪ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಸ್ವಾಮೀಜಿ ಕೆಟ್ಟ ಭಾಷೆ, ಅಶ್ಲೀಲ ಮೆಸೇಜ್ ಮಾಡುವ ಜೊತೆಗೆ ಅನಗತ್ಯ ದೈಹಿಕ ಸಂಪರ್ಕ ಹೊಂದಿದ್ದರು ಎಂದು 17 ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್‌ನೊಂದಿಗೆ ರಾಜತಾಂತ್ರಿಕ ವಾಹನ ಬಳಸುತ್ತಿದ್ದ ವಿಚಾರವೂ ಬಯಲಾಗಿದ್ದು, ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೈತನ್ಯಾನಂದ ಸರಸ್ವತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿ ಅಧ್ಯಾಪಕರು/ನಿರ್ವಾಹಕರಾಗಿ ಕೆಲಸ ಮಾಡುವ ಮಹಿಳೆಯರು ಒತ್ತಡ ಹೇರಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದರು.
15ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಪಡೆಯುತ್ತಿರುವ 32 ಮಹಿಳಾ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 4 ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯು ಸಂಸ್ಥೆಯ ಸಂಚಾಲಕ ಆಗಿದ್ದ ಎಂಬುದು ಗೊತ್ತಾಗಿದೆ.