Wednesday, February 26, 2025
Menu

ನಮ್ಮ ಪ್ರಯಾಣಿಕರ ಸುರಕ್ಷತೆಗೆ ನಮ್ಮ ಬಸ್‌ಗಳಲ್ಲಿ ಭದ್ರತಾ ಸಿಬ್ಬಂದಿ: ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕಕ್ಕೆ ಸಂಚರಿಸುವ ರಾಜ್ಯ ಸಾರಿಗೆ ನಿಗಮದ ಬಸ್ಸುಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ತಿಳಿಸಿದ್ದಾರೆ. ರಾಜ್ಯ ಸಾರಿಗೆ ಬಸ್ಸುಗಳ ಸಿಬ್ಬಂದಿ ಮೇಲೆ ಕರ್ನಾಟಕ ಗಡಿಯಲ್ಲಿ ನಡೆದ ಹಲ್ಲೆಗಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಾರಿಗೆ ಸಚಿವನಾಗಿ ನಮ್ಮ ಪ್ರಯಾಣಿಕರ ಭದ್ರತೆಯ ಬಗ್ಗೆ ಯೋಚಿಸಬೇಕು. ಕರ್ನಾಟಕಕ್ಕೆ ಹೋಗುವ ನಮ್ಮ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಭದ್ರತಾ ಮಾರ್ಷಲ್‌ ಗಳು ಅಥವಾ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಮಹಾರಾಷ್ಟ್ರದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕರ್ನಾಟಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಜ್ಯ ತನ್ನ ಜನರ ಮೇಲಿನ ಯಾವುದೇ ಕಿರುಕುಳವನ್ನು ಹಾಗೂ ನೆರೆಯ ರಾಜ್ಯದ ಜನರು ನಮ್ಮ ಜನರನ್ನು ಬೆದರಿಸಿದರೆ ನಾವು ಸಹಿಸುವುದಿಲ್ಲ. ಗಡಿ ಭಾಗದಲ್ಲಿ ಉದ್ವಿಗ್ನತೆ ಮುಂದುವರಿದಿದ್ದರೂ, ಎರಡೂ ರಾಜ್ಯಗಳ ನಡುವೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಿಂದಿನ ಪರಿಸ್ಥಿತಿಯನ್ನು ಮರಳಿ ಸ್ಥಾಪಿಸಲು ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದ ಬಸ್‌ಗಳಿಗೆ ಮಹಾರಾಷ್ಟ್ರ ಸರಕಾರದ ಕಡೆಯಿಂದ ಸುರಕ್ಷತೆಯ ಭರವಸೆ ಸಿಕ್ಕ ಬಳಿಕವೇ ಬಸ್‌ ಸಂಚಾರ ಸೇವೆ ಪುನಃ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರದಿಂದ ಭದ್ರತೆಗೆ ಏರ್ಪಾಡಾದ ಬಗ್ಗೆ ಖಚಿತ ಮಾಹಿತಿ ಬಂದ ಬಳಿಕವೇ ಬಸ್‌ ಸಂಚಾರವನ್ನು ಮತ್ತೆ ಆರಂಭಿಸಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಬಸ್‌ ಮತ್ತು ಪ್ರಯಾಣಿ ಕರಿಗೆ ಸೂಕ್ತ ರಕ್ಷಣೆಯನ್ನು ಸರಕಾರ ನೀಡಲಿದೆ. ಈ ವಿಚಾರವನ್ನೂ ಮಹಾರಾಷ್ಟ್ರ ಸರಕಾರಕ್ಕೆ ಮನದಟ್ಟು ಮಾಡಲು ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅಲೋಕ್‌ ಮೋಹನ್‌ಗೆ ಸಿಎಂ ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *