Saturday, February 22, 2025
Menu

ಛತ್ತೀಸ್‌ಗಢ ಎನ್‌ಕೌಂಟರ್‌ನಲ್ಲಿ 31 ನಕ್ಸಲರು ಹತ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ  ಭದ್ರತಾಪಡೆಗಳು  ಎನ್‌ಕೌಂಟರ್‌ನಲ್ಲಿ  31 ನಕ್ಸಲರನ್ನು ಹೊಡೆದುರುಳಿಸಿವೆ. ಕಾರ್ಯಾ ಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ.  ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಆಧರಿಸಿ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದ ದಟ್ಟಾರಣ್ಯದಲ್ಲಿ ನಕ್ಸಲರ ಅಡಗುತಾಣದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮತ್ತು ವಿಶೇಷ ಕಾರ್ಯಪಡೆಯ ತಂಡ ದಾಳಿ ನಡೆಸಿತ್ತು.

ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ. ಹಲವು ಗಂಟೆ ಗುಂಡಿನ ಚಕಮಕಿ ಬಳಿಕ ಸ್ಥಳದಲ್ಲಿ 31 ನಕ್ಸಲರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಎಕೆ-47, ಐಎನ್‌ಎಸ್‌ಎಎಸ್‌, ಎಸ್‌ಎಲ್‌ಆರ್‌ ಮತ್ತು 303 ರೈಫಲ್ಸ್‌ಗಳು, ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌ಗಳು, ಸ್ಫೋಟಕ ಪತ್ತೆಯಾಗಿವೆ. ಗುಂಡಿನ ಚಕಮಕಿ ವೇಳೆ ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆಯ ಇಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಗಾಯಗೊಂಡಿದ್ದ ಇಬ್ಬರು ಜವಾನರನ್ನು ಏರ್‌ಲಿಫ್ಟ್‌ ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡು ಸುತ್ತಮುತ್ತ ಕೂಂಬಿಂಗ್‌ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಬಸ್ತಾರ್‌ ರೇಂಜ್‌ನ ಇನ್ಸ್‌ಪೆಕ್ಟರ್‌ ಜನರಲ್‌ ಸುಂದರ್‌ರಾಜ್‌ ಪಿ. ಮಾಹಿತಿ ನೀಡಿದ್ದಾರೆ.
ಛತ್ತೀಸ್‌ಗಢದಲ್ಲಿ ಈ ವರ್ಷವೊಂದರಲ್ಲೇ ಭದ್ರತಾ ಪಡೆಗಳ ಗುಂಡಿಗೆ 81 ನಕ್ಸಲರು ಬಲಿಯಾಗಿದ್ದಾರೆ. 65 ಜನರು ಬಸ್ತರ್‌ ವಲಯದಲ್ಲಿ ಹತರಾಗಿದ್ದಾರೆ. ಕಳೆದ ವರ್ಷ ಹಲವು ಕಾರ್ಯಾಚರಣೆಯಲ್ಲಲಿ 219 ನಕ್ಸಲರು ಹತರಾಗಿದ್ದರು. ಕಳೆದ ವರ್ಷದ ಅ.4ರಂದು ಅಬುಜ್‌ಮದ್‌ ಪ್ರದೇಶದಲ್ಲಿ ನಡೆದ ಎನ್ಕೌಂಟರ್‌ ವೇಳೆ 38 ನಕ್ಸಲರು ಪ್ರಾಣ ತೊರೆದಿದ್ದರು.

026ರ ಮಾರ್ಚ್ 31ರ ಮೊದಲು ದೇಶದಿಂದ ನಕ್ಸಲಿಸಂನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ. ನಕ್ಸಲರಿಂದ ದೇಶದ ನಾಗರಿಕರು ಪ್ರಾಣ ಕಳೆದುಕೊಳ್ಳಬಾರದು ಎನ್ನುವ ನನ್ನ ಸಂಕಲ್ಪವನ್ನು ಪುನರುಚ್ಚರಿಸುತ್ತೇನೆ. ದೇಶವನ್ನು ನಕ್ಸಲಿಸಂ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿಜಾಪುರದ ಭದ್ರತಾ ಪಡೆಗಳು ಬಹುದೊಡ್ಡ ಯಶಸ್ಸನ್ನು ಪಡೆದಿವೆ ಎಂದು ಬಿಜೆಪಿ ಮುಖಂಡ, ಗೃಹ ಸಚಿವ   ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *