ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಬಿ ರಿಪೋರ್ಟ್ ಸಲ್ಲಿಸಿದ್ದು, ಈ ಆರೋಪ ಸಾಬೀತಾಗಿಲ್ಲ ಎಂದು ಹೇಳಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಇನ್ನೂ ಬಿ ರಿಪೋರ್ಟ್ ಅನ್ನು ಮಾನ್ಯ ಮಾಡಿಲ್ಲ. ಆದರೆ ಬಲವಂತದ ಕ್ರಮ ಅಥವಾ ಬಂಧನ ಮಾಡದಂತೆ ಹೈಕೋರ್ಟ್ ಗೆ ಹಾಕಿದ್ದ ಜಾಮೀನು ಅರ್ಜಿ ಮುಂದುವರಿದಿದೆ.
ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ತನ್ನನ್ನು ಮನೆಗೆ ಕರೆಸಿ ಹೆದರಿಸಿ ಮುನಿರತ್ನ ಹಾಗೂ ಅವರ ಕಡೆಯವರು ಅತ್ಯಾಚಾರ ನಡೆಸಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಬಗ್ಗೆ ವೀಡಿಯೊ ಕೂಡ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪರಿಶೀಲಿಸಿದಾಗ ಯಾವುದೇ ನಿದ್ರೆ ಮಾತ್ರೆ ಸೇವಿಸಿದ ಸುಳಿವು ಸಿಕ್ಕಿರಲಿಲ್ಲ. ಅತ್ಯಾಚಾರದ ಆರೋಪಕ್ಕೆ ಸಾಕ್ಷಿ ಇಲ್ಲ ಎಂದು ತನಿಖೆ ನಡೆಸಿದ ಎಸ್‌ಐಟಿ ಬಿ ರಿಪೋರ್ಟ್ ನೀಡಿದೆ. ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಎರಡನೇ ಅತ್ಯಾಚಾರ ಪ್ರಕರಣದ ರದ್ದು ಕೋರಿ ಮುನಿರತ್ನ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶಾಸಕ ಮುನಿರತ್ನರನ್ನು ಬಂಧಿಸದಂತೆ ಮಧ್ಯಂತರ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ.