2026 ರ ದ್ವಿತೀಯ ಪಿಯು ಪರೀಕ್ಷೆಗಳ ವೇಳಾಪಟ್ಟಿಯನ್ನು ಕೆಎಸ್ಇಎಬಿ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ) ಪ್ರಕಟಿಸಿದೆ, ಪ್ರಾಯೋಗಿಕ ಪರೀಕ್ಷೆಗಳು ಜನವರಿ 27 ರಿಂದ ಪ್ರಾರಂಭವಾಗಿ ಫೆಬ್ರವರಿ 2ರವರೆಗೆ ನಡೆಯಲಿದೆ.
ಬಳಿಕ ಮುಖ್ಯ ಥಿಯರಿ ಪರೀಕ್ಷೆಗಳು 2026 ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ. ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾ ಕೇಂದ್ರಗಳು ಮತ್ತು ಸಮಯದ ಬಗ್ಗೆ ವಿದ್ಯಾರ್ಥಿಗಳು ಶಾಲೆಗಳಿಂದ ನೇರವಾಗಿ ವೇಳಾಪಟ್ಟಿ ಪಡೆಯಬಹುದಾಗಿದೆ.
ಪರೀಕ್ಷೆಗಳ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಸಮಿತಿ ರಚಿಸಲಾಗುತ್ತದೆ. ಸಮಿತಿಯು ಆಯಾ ವಿಜ್ಞಾನ ವಿಷಯದ ಒಬ್ಬ ಪ್ರಾಂಶುಪಾಲರನ್ನು ಸಂಯೋಜಕರಾಗಿ ಒಳಗೊಂಡಿರುತ್ತದೆ. ಪ್ರತಿ ಪ್ರಾಯೋಗಿಕ ವಿಷಯಕ್ಕೆ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸುವ ಜವಾಬ್ದಾರಿ ಜಿಲ್ಲಾ ಸಮಿತಿಯದ್ದಾಗಿದೆ.
ಪ್ರಾಕ್ಟಿಕಲ್ ಪರೀಕ್ಷೆಗಳ ಸಮಯದಲ್ಲಿ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಸುಗಮವಾಗಿ ಮತ್ತು ನ್ಯಾಯಯುತವಾಗಿ ಪರೀಕ್ಷೆ ಬರೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಕೆಎಸ್ಇಎಬಿ ಹೇಳಿದೆ.


