ಮಂಗಳೂರು: ಧರ್ಮಸ್ಥಳದಲ್ಲಿ ವರ್ಷಗಳ ಹಿಂದೆ ನೂರಾರು ಶವಗಳನ್ನು ಹೂಳಿದ್ದೇನೆ ಎಂದು ಹೇಳಿಕೆ ನೀಡಿದ್ದ ಅನಾಮಿಕ ತೋರಿಸಿರುವ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಹೂಳಲ್ಪಟ್ಟಿರುವ ಶವಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ.
ಅನಾಮಿಕ ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ ಧರ್ಮಸ್ಥಳ ಗ್ರಾಮದಿಂದ ಅನತಿ ದೂರದಲ್ಲಿರುವ ನೇತ್ರಾವತಿ ನದಿಯ ಪಕ್ಕದಲ್ಲೇ ಇದೆ. ನದಿಗೂ ಈ ಜಾಗಕ್ಕೂ ಕೇವಲ 10 ಮೀಟರ್ ಅಂತರವಿದ್ದು, ಭೂಮಿಯನ್ನು ಅಗೆದಂತೆಲ್ಲಾ ನೀರು ಒಸರುತ್ತಿದೆ. ನೀರಿನ ಒರತೆ ನಡುವೆ ಮಳೆ ಕೂಡ ಬೀಳುತ್ತಿರುವುದರಿಂದ ಉತ್ಖನನ ಕೆಲಸಕ್ಕೆ ಅಡ್ಡಿಯುಂಟಾಗಿದೆ.
ದೂರುದಾರ ತೋರಿಸಿದ ಮೊದಲ ಜಾಗದಲ್ಲಿ ಭೂಮಿಯನ್ನು ಅಗೆಯುವ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ವೇಳೆಗೆ ಆರಂಭವಾಗಿದ್ದು. ಸುಮಾರು 4 ಅಡಿ ಆಳದವರೆಗೆ ಅಗೆಯಲಾಗಿದೆ. ಆದರೆ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ. ಮಣ್ಣಿನಿಂದಲೂ ನೀರು ಉಕ್ಕುತ್ತಿದೆ. ಇದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜೆಸಿಬಿ ಬಳಸಲು ನಿರ್ಧರಿಸಲಾಗಿದೆ.
ಸಾಕ್ಷಿ ದೂರುದಾರನಿಗೆ ಸಂತೃಪ್ತಿಯಾಗುವವರೆಗೆ ಹಾಗೂ ನಮಗೆ ಇನ್ನು ಅಗೆಯುವ ಅಗತ್ಯವಿಲ್ಲ ಎಂದು ಮನವರಿಕೆ ಆಗುವವರೆಗೆ ಅಗೆಯುವ ಕಾರ್ಯ ಮುಂದುವರಿಸಲಿದ್ದೇವೆ. ಒಂದು ಜಾಗದಲ್ಲಿ ಅಗೆಯುವ ಕಾರ್ಯವನ್ನು ಪೂರ್ಣಗೊಳಿಸದ ಬಳಿಕವೇ ಎರಡನೇ ಜಾಗದಲ್ಲಿ ಅಗೆಯುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಐಟಿಯ ಡಿಐಜಿ ಎಂ.ಎನ್.ಅನುಚೇತ್ ಹಾಗೂ ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.