ಕೊಪ್ಪಳ: ಕೊಪ್ಪಳದ ಜನತೆಗೆ ಪ್ರತಿ ವರ್ಷದಂತೆ ಹೊಸ ವರ್ಷದ ಹೊಸ್ತಿಲ ದಾಟಿ ಬರುವ ಮೊದಲ ಸಡಗರವೇ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ. ಇದು ಕೇವಲ ಮಠದ ಜಾತ್ರೆ ಎನಿಸದೇ ಸಮಾಜಮುಖಿಯ ಯಾತ್ರೆ ಎಂದೇ ಪ್ರಸಿದ್ಧಿ. ಇಂಥ ವೈಭವದ ಜಾತ್ರೆಯ ಮಹಾರಥೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.
ನಸುಕಿನ ಜಾವ 2 ಗಂಟೆಯಿಂದಲೇ ಗವಿಮಠಕ್ಕೆ ಭಕ್ತರ ದಂಡು ಹರಿದು ಬರಲಾರಂಭಿಸಿತು. ಭಕ್ತರ ಹಸಿವು ನೀಗಿಸಲು ದಾಸೋಹದ ವ್ಯವಸ್ಥೆ ಅಚ್ಚುಕಟ್ಟಾಗಿದ್ದರಿಂದ ಜನರು ಮಠದ ಸುತ್ತಮುತ್ತ ಇರುವ ಜಾತ್ರೆಯ ಸಡಗರವನ್ನು ಸಂಜೆವರೆಗೆ ಕಣ್ತುಂಬಿಕೊಂಡು ರಥೋತ್ಸವದ ಬಳಿಕ ಭಕ್ತಿಭಾವದಿಂದ ಮನೆಗೆ ಮರಳಿದರು. ಮಠದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದು, ಸಂಚಾರ ದಟ್ಟಣೆ ಉಂಟಾಗದೇ, ಜನಸಂಚಾರ ಸುಗಮವಾಗಿತ್ತು. ಮೂರು ದಿನಗಳ ಕಾಲ ಮಠದ ಸುತ್ತಲೂ ಈ ವಾತಾವರಣವನ್ನೇ ಕಾಯ್ದುಕೊಳ್ಳಲಾಗುತ್ತದೆ.
ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ:
ಸಂಜೆಯಾಗುತ್ತಿದ್ದಂತೆ ಗವಿಮಠದ ಆವರಣದಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಜಮಾವಣೆಗೊಂಡಿತು. ಸುಮಾರು 5 ಲಕ್ಷ ಜನರು ರಥೋತ್ಸವದ ವೇಳೆ ಸೇರಿದ್ದರು. ಸಂಸ್ಥಾನ ಶ್ರೀ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ತೆರನೇಳೆಯಲಾಯಿತು. ಉತ್ತತ್ತಿ, ಬಿಲ್ಪತ್ರೆ, ಬೇಡವೆಂದರೂ ಬಾಳೆಹಣ್ಣು, ನಾಣ್ಯಗಳನ್ನು ತೇರಿನತ್ತ ಎಸೆದು ನಿಷ್ಕಲ್ಮಶ ಭಕ್ತಿ ಮೆರೆದು ಜನ ಪುನೀತರಾದರು. ಸುಮಾರು ಒಂದು ಕಿ.ಮೀ. ದೂರದವರೆಗೆ ಸಾಗಿದ ತೇರಿಗೆ ನಿಂತಲ್ಲೇ ಕೈ ಮುಗಿದ ಜನರು, ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ ಎನ್ನುತ್ತಾ ಜಯಕಾರ ಸಮರ್ಪಿಸಿದರು.


