ಎಸ್ಡಿಎಂಸಿ ಅಧ್ಯಕ್ಷನ ವೈಯಕ್ತಿಕ ಸಾಲ ತೀರಿಸದ ಕಾರಣ ರಾಯಚೂರು ತಾಲೂಕಿನ ಕೂಡ್ಲೂರು ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳ ಬಿಸಿಯೂಟವನ್ನು ಬ್ಯಾಂಕ್ ಕಸಿದುಕೊಂಡಿದೆ. ಯಾವುದೋ ವ್ಯಕ್ತಿ ಪಡೆದ ಸಾಲಕ್ಕೆ ಬ್ಯಾಂಕ್ ಶಾಲಾ ಮಕ್ಕಳ ಬಿಸಿಯೂಟಕ್ಕೆ ತೊಂದರೆ ನೀಡುತ್ತಿದೆ. ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯಿಂದ 255 ಮಕ್ಕಳ ಬಿಸಿಯೂಟಕ್ಕೆ ಸಮಸ್ಯೆಯಾಗಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಯರಮರಸ್ ಶಾಖೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ವೈಯಕ್ತಿಕ ಸಾಲ ತೆಗೆದುಕೊಂಡು ತೀರಿಸಿಲ್ಲ. ಎಸ್‌ಡಿಎಂಸಿ ಅಧ್ಯಕ್ಷ ಆಗಿರುವ ಕಾರಣ ಶಾಲೆಯ ಜಂಟಿ ಖಾತೆಯಲ್ಲಿ ಅವರ ಹೆಸರಿದೆ.
ಜಗದೀಶ್ ಸಾಲ ತೀರಿಸಿದರೆ ಮಾತ್ರ ಶಾಲೆಯ ಚೆಕ್‍ಗಳನ್ನ ಪಾಸ್ ಮಾಡುತ್ತೇವೆ ಎಂಬುದು ಬ್ಯಾಂಕ್ ಸಿಬ್ಬಂದಿಯ ವಾದ. ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ, ಬಾಳೆಹಣ್ಣು, ಅಡುಗೆ ಅನಿಲದ ಸಿಲಿಂಡರ್ ವೆಚ್ಚ ಚೆಕ್ ಮೂಲಕವೇ ಭರಿಸಬೇಕಿದೆ. ಆದರೆ ಬ್ಯಾಂಕ್ ಸಿಬ್ಬಂದಿ ಚೆಕ್ ಪಾಸ್ ಮಾಡದ ಕಾರಣ ಬಿಸಿಯೂಟದ ಸಾಮಗ್ರಿಗಳ ಖರೀದಿ ಸಮಸ್ಯೆಯಾಗಿದೆ. ಎಸ್‍ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯರ ಹೆಸರಿನಲ್ಲಿರುವ ಜಂಟಿ ಖಾತೆಗೂ ಎಸ್‍ಡಿಎಂಸಿ ಅಧ್ಯಕ್ಷರ ವೈಯಕ್ತಿಕ ಸಾಲಕ್ಕೂ ಬ್ಯಾಂಕ್ ಸಂಬಂಧ ಕಲ್ಪಿಸುವಂತಿಲ್ಲ ಎಂದು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬ್ಯಾಂಕ್‍ಗೆ ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಬಿಸಿಯೂಟಕ್ಕೆ ತೊಂದರೆಯಾಗುತ್ತಿದ್ದು ಹಣದ ಕೊರತೆ ಎದುರಾಗಿದೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್ ಬ್ಯಾಂಕ್‍ನಲ್ಲಿ ಒಂದು ಲಕ್ಷ ರೂ. ವೈಯಕ್ತಿಕ ಸಾಲ ತೆಗೆದುಕೊಂಡಿದ್ದು, ಎರಡು ಕಂತು ಬಾಕಿ ಉಳಿಸಿಕೊಂಡಿದ್ದಾರೆ. ಬಿಸಿಯೂಟದ ಸಾಮಗ್ರಿ ಖರೀದಿಸಿ ವ್ಯಾಪಾರಿಗಳಿಗೆ ನೀಡಿದ ಚೆಕ್‍ಗಳು ಪಾಸ್ ಆಗದೇ ವ್ಯಾಪಾರಿಗಳು ಚೆಕ್ ವಾಪಸ್ ಕೊಡುತ್ತಿದ್ದಾರೆ. ಈ ಹಿಂದೆ ಒಂದು ಕಂತು ಕಟ್ಟಿದಾಗ ಮಾತ್ರ ಚೆಕ್ ಪಾಸ್ ಮಾಡಿದ್ದರು. ಸಾಲದ ಕಂತು ಕಟ್ಟಲು ಕಾಲಾವಕಾಶ ಕೊಡಿ ಕಟ್ಟುತ್ತೇನೆ. ಕಂತು ಕಟ್ಟದಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಿ. ಶಾಲೆಯ ಚೆಕ್ ಪಾಸ್ ಮಾಡದೆ ತೊಂದರೆ ಕೊಡಬೇಡಿ ಎಂದು ಜಗದೀಶ್ ಬ್ಯಾಂಕ್ ಮ್ಯಾನೇಜರ್‌ಗೆ ಮನವಿ ಮಾಡಿದ್ದಾರೆ. ಆದರೂ ಬ್ಯಾಂಕ್‌ನವರು ಕೇಳುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕಿದೆ.


