Menu

ಕಪ್ಪುತಲೆ ಹುಳು ಬಾಧೆಗೆ ವೈಜ್ಞಾನಿಕ ಸಮೀಕ್ಷೆ: 42,000 ಹೆಕ್ಟೇರ್ ತೆಂಗು ಹಾನಿ!

dinesh gooligowda

ಬೆಂಗಳೂರು: ಕರ್ನಾಟಕದಲ್ಲಿ ತೆಂಗು ಬೆಳೆಗಾರರಿಗೆ ಕಾಡುತ್ತಿರುವ ಕಪ್ಪುತಲೆ ಹುಳುವಿನಿಂದ ಸುಮಾರು 42,000 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದ್ದು, ಸಮಸ್ಯೆಯ ಕುರಿತು ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ರೂ. 25 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಜೊತೆಗೆ ಸಮೀಕ್ಷೆಗಾಗಿ ಪ್ರತ್ಯೇಕವಾಗಿ ಬೆಳೆ ಸಮೀಕ್ಷೆ ತಂತ್ರಾಂಶವನ್ನು (App) ಅಭಿವೃದ್ಧಿಪಡಿಸಲೂ ಮುಂದಾಗಿದೆ. ಸಮೀಕ್ಷಾ ವರದಿಯ ಬಳಿಕ ಸಸ್ಯ ಸಂರಕ್ಷಣಾ ಕ್ರಮಗಳ ಶಿಫಾರಸು ಸೇರಿದಂತೆ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ತೀರ್ಮಾನಕ್ಕೆ ತೋಟಗಾರಿಕೆ ಇಲಾಖೆ ಬಂದಿದೆ.

ತೆಂಗು ಬೆಳೆಗೆ ಕಾಡುತ್ತಿರುವ ಕಪ್ಪುತಲೆ ಹುಳುವಿನ ಬಾಧೆ ನಿಯಂತ್ರಣದ ಬಗ್ಗೆ ಶಾಸಕರಾದ ದಿನೇಶ್ ಗೂಳಿಗೌಡ ಅವರು ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದರು. ಈ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ತಜ್ಞರ ವರದಿ ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಈ ಸಂಬಂಧ ಕ್ರಮ ಕೈಗೊಂಡಿರುವ ತೋಟಗಾರಿಕೆ ನಿರ್ದೇಶನಾಲಯವು ಸರ್ಕಾರದ ಕಾರ್ಯದರ್ಶಿಗಳು, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗೆ ಪತ್ರದ ಮೂಲಕ ಮಾಹಿತಿ ನೀಡಿದೆ.

ತೋಟಗಾರಿಕೆ ನಿರ್ದೇಶನಾಲಯದ ಪತ್ರದಲ್ಲೇನಿದೆ?

ರಾಜ್ಯದಲ್ಲಿ ಒಟ್ಟು 27.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ವಾರ್ಷಿಕ 223.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಇದರಲ್ಲಿ ತೋಟದ ಬೆಳೆಗಳು ಶೇ. 53.26 ರಷ್ಟು ವಿಸ್ತೀರ್ಣವನ್ನು ಹೊಂದಿವೆ. ತೆಂಗನ್ನು 7.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 34.79 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಮುಖ್ಯವಾಗಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅಧಿಕ ಉಷ್ಣಾಂಶ ಇದ್ದುದರಿಂದ ತೆಂಗಿನಲ್ಲಿ ಕಪ್ಪುತಲೆ ಹುಳುವಿನ ಬಾಧೆ ಹೆಚ್ಚಾಗಿ ಕಂಡುಬಂದಿದ್ದು, ಸುಮಾರು 42,000 ಹೆಕ್ಟೇರ್ ಪ್ರದೇಶದಲ್ಲಿ ಈ ಬಾಧೆಯಿಂದ ಹಾನಿಯಾಗಿರುವುದಾಗಿ ಇಲಾಖೆ ಅಂದಾಜಿಸಿದೆ.

ಸಮೀಕ್ಷೆ ಮತ್ತು ಪರಿಹಾರ ಕ್ರಮಗಳು

2025-26 ನೇ ಸಾಲಿನ ಆಯವ್ಯಯದಲ್ಲಿ ತೆಂಗಿನ ಕಪ್ಪುತಲೆ ಹುಳು ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ಕೈಗೊಂಡು ಅದರ ಆಧಾರದಲ್ಲಿ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸುವ ಬಗ್ಗೆ ಘೋಷಣೆಯಾಗಿರುತ್ತದೆ. ಈ ಘೋಷಣೆಯನ್ನು ಅನುಷ್ಠಾನಗೊಳಿಸಲು, ಕಪ್ಪುತಲೆ ಹುಳು ಬಾಧಿತ ಜಿಲ್ಲೆಗಳಲ್ಲಿ ಖಾಸಗಿಯಾಗಿ ಬೆಳೆ ಸಮೀಕ್ಷೆ ಮಾದರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ 25 ಲಕ್ಷ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಸಮೀಕ್ಷೆಗಾಗಿ ಪ್ರತ್ಯೇಕವಾಗಿ ಬೆಳೆ ಸಮೀಕ್ಷೆ ತಂತ್ರಾಂಶವನ್ನು (Mobile App) ಅಭಿವೃದ್ಧಿಪಡಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಸಮೀಕ್ಷೆ ಪೂರ್ಣಗೊಂಡ ನಂತರ, ಇಲಾಖಾ ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಿರುವ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಚರ್ಚೆಯ ನಂತರ, ಕಪ್ಪುತಲೆ ಹುಳುವಿನ ಬಾಧೆಯ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತ ಶಿಫಾರಸು ಸಹಿತ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

Related Posts

Leave a Reply

Your email address will not be published. Required fields are marked *