ಚಿತ್ರದುರ್ಗದ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಖಾಸಗಿ ಸ್ಲೀಪರ್ ಕೋಚ್ ಬಸ್ ನಡುವೆ ಅಪಘಾತ ನಡೆದಿದ್ದು, 17 ಮಂದಿ ಸಜೀವ ದಹನಗೊಂಡ ವೇಳೆ ಅದರ ಹಿಂದಿದ್ದ ಶಾಲಾ ಬಸ್ಸಿಗೂ ಬೆಂಕಿ ತಗುಲಿದೆ.
ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಬೆಂಕಿ ಹತ್ತಿಕೊಂಡಿದ್ದು, ಬಸ್ಸು ರಾಷ್ಟ್ರೀಯ ಹೆದ್ದಾರಿಯ ಬೇಲಿಯನ್ನು ಕಿತ್ತು ಚರಂಡಿ ದಾಟಿ ಹೋಗಿ ನಿಂತಿದೆ. ಅದೃಷ್ಟವಷಾತ್ ಬಸ್ಸಿನಲ್ಲಿದ್ದ 42 ಮಕ್ಕಳಲ್ಲಿ ಒಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ.
ಮಕ್ಕಳಿದ್ದ ಬಸ್ಸಿನ ಚಾಲಕನ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದ್ದು, ಮೃತದೇಹಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮೃತಪಟ್ಟ ಪ್ರಯಾಣಿಕರು ಡಿಜಿಟಲ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದರಿಂದ ದೂರವಾಣಿ ಸಂಖ್ಯೆಗಳನ್ನು ಬಳಸಿ ಸಂಬಂಧಿಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ.
ಅಪಘಾತದ ಸೂಕ್ತ ತನಿಖೆ ನಡೆಸಿ, ಕಾರಣ ಪತ್ತೆಹಚ್ಚಲಾಗುವುದು: ಮುಖ್ಯಮಂತ್ರಿ
ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು.ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಹಾಗೂ ಟ್ರಕ್ ನಡುವೆ ಹಿರಿಯೂರು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಸಜೀವ ದಹನಗೊಂಡಿರುವುದು ತಿಳಿದು ತೀವ್ರ ಆಘಾತವಾಗಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ. ಮೃತರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ, ಅಪಘಾತದಲ್ಲಿ ಗಾಯಗೊಂಡವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50,000 ರೂ. ನೆರವು ನೀಡುವುದಾಗಿ ಹೇಳಿದ್ದಾರೆ.


