ಗುಜರಾತ್‌ನ ಒಂದು ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಅಂತಾರಾಷ್ಟ್ರೀಯ ಪೋರ್ನ್ ವೆಬ್ಸೈಟ್‌ಗಳಲ್ಲಿ ಬಹಿರಂಗಗೊಂಡಿವೆ. ಈ ಮೂಲಕ ಮಹಿಳೆಯರ ಖಾಸಗಿ ಗೌಪ್ಯತೆಯ ಗಂಭೀರ ಉಲ್ಲಂಘನೆ ನಡೆದಿದ್ದು, ದುರ್ಬಲ ಪಾಸ್‌ವರ್ಡ್‌ಗಳೇ ಈ ಅನಾಹುತಕ್ಕೆ ಮುಖ್ಯ ಕಾರಣವೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಹ್ಯಾಕರ್‌ಗಳು ಆಸ್ಪತ್ರೆಯ ಸಿಸಿಟಿವಿ ಸಿಸ್ಟಂನ ಪಾಸ್‌ವರ್ಡ್ ‘admin123’ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಿ ಹ್ಯಾಕ್ ಮಾಡಿದ್ದಾರೆ. ಇದರಿಂದಾಗಿ ವೈದ್ಯರು ಮಹಿಳೆಯರಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿರುವ ಖಾಸಗಿ ದೃಶ್ಯಗಳು ಹ್ಯಾಕರ್‌ಗಳ ಕೈಗೆ ಸಿಕ್ಕಿವೆ. ಈ ದೃಶ್ಯಗಳನ್ನು ಅಂತಾರಾಷ್ಟ್ರೀಯ ಪೋರ್ನ್ ವೆಬ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
2024ರ ಜನವರಿಯಿಂದ ಡಿಸೆಂಬರ್‌ವರೆಗೆ 9 ತಿಂಗಳು ಈ ಕೃತ್ಯ ನಡೆದಿದೆ. ಈ ಅವಧಿಯಲ್ಲಿ 80 ಸಿಸಿಟಿವಿ ಕ್ಯಾಮೆರಾಗಳಿಂದ 50,000ಕ್ಕೂ ಹೆಚ್ಚು ದೃಶ್ಯಗಳನ್ನು ಸೈಬರು ಖದೀಮರು ಕದ್ದಿದ್ದಾರೆ.
ಗುಜರಾತ್‌ನ ಆಸ್ಪತ್ರೆ ಮಾತ್ರವಲ್ಲದೆ ದೆಹಲಿ, ಪುಣೆ, ನಾಸಿಕ್, ಮುಂಬೈ, ಸೂರತ್, ಅಹಮದಾಬಾದ್ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು, ಕಾರ್ಖಾನೆ ಗಳು ಮತ್ತು ಕೆಲವು ಮನೆಗಳ ಸಿಸಿಟಿವಿ ದೃಶ್ಯಗಳು ಹ್ಯಾಕರ್‌ಗಳ ಕೈಗೆ ಸಿಕ್ಕಿ ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನಲ್‌ಗಳಲ್ಲಿಯೂ ಅಪ್‌ಲೋಡ್ ಆಗಿವೆ. ಮಹಿಳೆಯರ ಗೌಪ್ಯತೆಯ ಜೊತೆಗೆ ಮಕ್ಕಳು, ಉದ್ಯೋಗಿಗಳು ಮತ್ತು ಸಾಮಾನ್ಯ ನಾಗರಿಕರ ಖಾಸಗಿ ಜೀವನಕ್ಕೂ ಧಕ್ಕೆಯುಂಟಾಗಿದೆ.
ಸೈಬರ್ ತಜ್ಞರು ಹೇಳುವ ಪ್ರಕಾರ, ದುರ್ಬಲ ಪಾಸ್‌ವರ್ಡ್‌ಗಳು ಸೈಬರ್ ದಾಳಿ ನಡೆಸುವವರಿಗೆ ಪ್ರಬಲ ಆಯುಧ, ‘admin123’ ರೀತಿ ಸರಳ ಪಾಸ್‌ವರ್ಡ್‌ಗಳನ್ನು ಬಳಸುವುದು ಹ್ಯಾಕರ್ ಗಳಿಗೆ ವ್ಯವಸ್ಥೆಯನ್ನು ಬೇಧಿಸಲು ಸುಲಭವಾಗಿ ಅವಕಾಶ ನೀಡುತ್ತದೆ. ಆಸ್ಪತ್ರೆಗಳಂತಹ ಸಂವೇದನಾಶೀಲ ಸ್ಥಳಗಳಲ್ಲಿ ಸಿಸಿಟಿವಿ ಸಿಸ್ಟಂಗಳನ್ನು ಆಧುನಿಕ ಭದ್ರತಾ ವ್ಯವಸ್ಥೆಗಳೊಂದಿಗೆ ಅಪ್ ಡೇಟ್ ಮಾಡದಿರುವುದು ಕೂಡ ಇಂಥ ಘಟನೆಗೆ ಕಾರಣವಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಡಿಜಿಟಲ್ ಭದ್ರತೆಯನ್ನು ಬಲಪಡಿಸಬೇಕಿದೆ.
ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದು, ಹ್ಯಾಕರ್‌ಗಳನ್ನು ಬಂಧಿಸಲು ಅಂತಾರಾಷ್ಟ್ರೀಯ ಸಹಕಾರ ಕೋರಿದ್ದಾರೆ. ಆದರೆ ಸೋರಿಕೆಯಾದ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಕಷ್ಟದ ಕೆಲಸ.


