ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು ಮತ್ತು ಕ್ರಿಶ್ಚಿಯನ್ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡರೆ ಆ ವ್ಯಕ್ತಿಗಳು ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (ಎಸ್‌ಸಿ,ಎಸ್ಟಿ ಕಾಯ್ದೆ)ಯಡಿ ರಕ್ಷಣೆ ಕೇಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿಕೆ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ ತೀರ್ಪಿನಲ್ಲಿ ಹೇಳಿದೆ.
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಪರಿಶಿಷ್ಟ ಜಾತಿಯ ಸದಸ್ಯರಾಗಿರುವುದಿಲ್ಲ. ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಆಂಧ್ರಪ್ರದೇಶ ಹೈಕೋರ್ಟ್‌ನ ಮೇ 2025 ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ ಮೇಲ್ಮನವಿಯನ್ವಯ ಈ ತೀರ್ಪು ನೀಡಲಾಗಿದೆ. ಆನಂದ್ ಅವರು ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ಜಾತಿ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸಿದ್ದಾರೆ ಎಂದು ಆರೋಪಿಸಿದರು. ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದರು ಮತ್ತು ಪೊಲೀಸರು ಅದರ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.
ರಾಮಿರೆಡ್ಡಿ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಎಸ್‌ಸಿ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ ಮತ್ತು ಆದ್ದರಿಂದ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್ ಹರಿನಾಥ್ ಎಫ್‌ಐಆರ್ ರದ್ದುಗೊಳಿಸಿದರು. ಬಳಿಕ ಆನಂದ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.


