ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಶಾಖೆಯೊಂದಕ್ಕೆ 8 ಲಕ್ಷ ರೂ. ವಂಚಿಸಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಿದೆ. ಆಧುನಿಕ ಇಮೇಜ್ ಸರ್ಚ್ ಟೂಲ್ಗಳನ್ನು ಬಳಸಿಕೊಂಡು ಸಿಬಿಐ ಆರೋಪಿಯ ಜಾಡು ಪತ್ತೆ ಹಚ್ಚಿದೆ ಎಂಬುದು ಗಮನಾರ್ಹ. ಮಣಿ ಎಂ ಶೇಖರ್ ಬಂಧಿತ ಆರೋಪಿಯಾಗಿದ್ದು, ಆಕೆ ಅಲ್ಲಿ ಬೇರೆ ಹೆಸರು ಇಟ್ಟುಕೊಂಡು ವಾಸಿಸುತ್ತಿದ್ದರು.
ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಾನುಜಂ, ಆರ್‌ಎಂ ಶೇಖರ್ ಮತ್ತು ಇಂಡೋ ಮಾರ್ಕ್ಸ್ ಆ್ಯಂಡ್ ಬಿಟಿಸಿ ಹೋಮ್ ಪ್ರಾಡಕ್ಟ್ಸ್ ಪ್ರೈವೇಟ್ ನಿರ್ದೇಶಕಿ ಮಣಿ ಎಂ ಶೇಖರ್ ವಿರುದ್ಧ 2006 ರ ಆಗಸ್ಟ್ 1 ರಂದು ಕೇಂದ್ರೀಯ ತನಿಖಾ ದಳದ ಬೆಂಗಳೂರು ಘಟಕ ಹಾಗೂ ಬ್ಯಾಂಕ್ ಭದ್ರತೆ ಮತ್ತು ವಂಚನೆಗಳ ಕೋಶ (ಬಿಎಸ್‌ಎಫ್‌ಬಿ) ಪ್ರಕರಣ ದಾಖಲಿಸಿದ್ದವು.
ಆರೋಪಿಗಳು ಇಂಡೋ ಮಾರ್ಕ್ಸ್ ಪ್ರೈವೇಟ್ ಮತ್ತು ಅದರ ಸಹೋದರ ಕಂಪನಿಗಳ ಹೆಸರಿನಲ್ಲಿ ನಿಧಿ-ಆಧಾರಿತವಲ್ಲದ ಮಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಸಾಗರೋತ್ತರ ಶಾಖೆಗೆ 800 ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದರು ಎಂದು ಸಿಬಿಐ ತಿಳಿಸಿದೆ.
ಆರೋಪಿಗಳ ವಿರುದ್ಧ ಸಿಬಿಐ 2007 ರ ಡಿಸೆಂಬರ್ 10 ರಂದು ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳಿಬ್ಬರೂ ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು 2009 ರ ಫೆಬ್ರವರಿ 27 ರಂದು ಘೋಷಿತ ಅಪರಾಧಿಗಳೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಆರೋಪಿಗಳು ಗುರುತನ್ನು ಬದಲಾಯಿಸಿಕೊಂಡಿದ್ದರು ಮತ್ತು ಹಳೆಯ ಕೆವೈಸಿ ವಿವರಗಳನ್ನು ಎಂದಿಗೂ ಬಳಸಿರಲಿಲ್ಲ. ತಮ್ಮ ಹೆಸರುಗಳನ್ನು ಕೃಷ್ಣ ಕುಮಾರ್ ಗುಪ್ತಾ ಮತ್ತು ಗೀತಾ ಕೃಷ್ಣ ಕುಮಾರ್ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದರು.
ಆಧುನಿಕ ಡಿಜಿಟಲ್ ಪರಿಕರಗಳು ಮತ್ತು ಸರ್ಚ್ ಟೂಲ್ಗಳ ಬಳಕೆಯಿಂದ ಇಂದೋರ್‌ನಲ್ಲಿ ಹೆಸರು ಮತ್ತು ಗುರುತು ಬದಲಿಸಿ ವಾಸಿಸುತ್ತಿರುವ ಆರೋಪಿಗಳನ್ನು ಗುರುತಿಸಲಾಗಿದೆ. ಶೇಕಡಾ 90 ಕ್ಕಿಂತ ಹೆಚ್ಚಿನ ಫೋಟೋ ಹೊಂದಾಣಿಕೆಯೊಂದಿಗೆ ಇಮೇಜ್ ಸರ್ಚ್ ಪರಿಕರಗಳು ಅವರ ನಿಖರ ಗುರುತನ್ನು ನೀಡಿದವು. ಆರೋಪಿ ಆರ್‌ಎಂ ಶೇಖರ್ 2008 ರಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ. ಪತ್ನಿ ಮಣಿ ಶೇಖರ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸಿಬಿಐ ತಿಳಿಸಿದೆ.