ಹೊಸ ವರ್ಷದ ಸಂಭ್ರಮ ಆಚರಿಸುವ ನೆಪದಲ್ಲಿ ತಾಯಿ ಹಾಗೂ ನಾಲ್ವರು ಸೋದರಿಯರಿಗೆ ಮದ್ಯ ಪೂರೈಸಿ ನಂತರ ಭೀಕರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಕ್ನೋದ ಖಾಸಗಿ ಹೋಟೆಲ್ ನಲ್ಲಿ ತಾಯಿ ಹಾಗೂ ತಂಗಿಯರಿಗೆ ಮದ್ಯ, ಆಹಾರ ಪೂರೈಸಿದ ಪುತ್ರ ೨೪ ವರ್ಷದ ಅರ್ಷದ್ ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರಕರಣ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತಪಟ್ಟ ಮಹಿಳೆಯರ ಕೈಗಳ ಮೇಲೆ ಗಾಯ, ತಿರುಚಿರುವುದು ಹಾಗೂ ಅವರ ಬಟ್ಟೆಗಳು ರಕ್ತಸಿಕ್ತವಾಗಿದ್ದನ್ನು ನೋಡಿದ್ದಾರೆ. ಮಹಿಳೆಯರಿಗೆ ಮದ್ಯ ಕುಡಿಸಿ ನಂತರ ಬ್ಲೇಡ್ ನಿಂದ ಕೈ ಮುಂತಾದ ಕಡೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾ ಮೂಲದ ಆಸ್ಮಾ ಹಾಗೂ 9 ವರ್ಷದ ಅಲಿಯಾ, 16 ವರ್ಷದ ಆಲಿಷಾ 18 ವರ್ಷದ ಆಕ್ಷಾ ಮತ್ತು 19 ವಯಸ್ಸಿನ ರಹಮೀನ್ ಮೃತಪಟ್ಟಿದ್ದು, ಮಗ ಕೊಲೆ ಮಾಡಿ ಸಿಕ್ಕಿಬಿದ್ದಿದ್ದರೆ ಘಟನೆ ನಡೆದಾಗ ಅದೇ ಹೋಟೆಲ್ ನಲ್ಲಿ ತಂಗಿದ್ದ ತಂದೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆಗೆ ತಂದೆ ಸಹಕರಿಸಿದ್ದಾನೆ ಎಂದು ಶಂಕಿಸಲಾಗಿದೆ.
ಡಿಸೆಂಬರ್ ೩೦ರಿಂದ ಕುಟುಂಬ ಲಕ್ನೋದ ಖಾಸಗಿ ಹೋಟೆಲ್ ನಲ್ಲಿ ತಂಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಕುಟುಂಬದಲ್ಲಿ ಮಾತಿನ ಚಕಮಕಿ ನಡೆದಿದ್ದು ನಂತರ ಯೋಜನೆ ರೂಪಿಸಿ ಹತ್ಯೆ ಮಾಡಲಾಗಿದೆ.
ಅರ್ಷದ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಮನೆಯ ಆಸ್ತಿಯ ಮೇಲೆ ಅಕ್ಕಪಕ್ಕದರ ಕಣ್ಣು ಬಿದ್ದಿದ್ದು, ಅಕ್ರಮವಾಗಿ ಜಾಗ ಮಾರಿ ತಾಯಿ ಹಾಗೂ ತಂಗಿಯರನ್ನು ಬೇರೆಡೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಆದ್ದರಿಂದ ಅವರನ್ನು ರಕ್ಷಿಸಲು ಹೀಗೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ನೆರೆಹೊರೆಯವರು ನಮ್ಮ ಜಾಗವನ್ನು ಅತಿಕ್ರಮಿಸಿದ್ದಾರೆ. ನಾವು ಕಳೆದ 15 ದಿನಗಳಿಂದ ಫುಟ್ ಪಾತ್ ಮೇಲೆ ಮಲಗುತ್ತಿದ್ದೇವೆ. ನಮ್ಮ ಜಾಗ ವಾಪಸ್ ಪಡೆಯಲು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಹಾಗೂ ತಂದೆಯ ಮೇಲೆ ಸುಳ್ಳು ಕೇಸ್ ಹಾಕಿಸಿ ತಾಯಿ, ತಂಗಿಯರನ್ನು ಬೇರೆಯವರಿಗೆ ಮಾರಾಟ ಆಗಬಾರದು ಎಂಬ ಕಾರಣಕ್ಕೆ ಈ ಕೆಲಸ ಮಾಡಿದೆ ಎಂದು ಆರೋಪಿ ಹೇಳಿದ್ದಾನೆ.
ನಾಳೆ ಬೆಳಿಗ್ಗೆ ವರೆಗೆ ನಾನು ಕೂಡ ಜೀವಂತವಾಗಿ ಇರುವುದಿಲ್ಲ ಎಂದು ವೀಡಿಯೋದಲ್ಲಿ ಆತ ಹೇಳಿಕೊಂಡಿದ್ದು, ಆತ್ಮಹತ್ಯೆಗೆ ನಿರ್ಧರಿಸಿದ್ದ ಎಂಬುದು ತಿಳಿದು ಬಂದಿದೆ. ನಮ್ಮ ಕುಟುಂಬ 1947ಕ್ಕೂ ಮುಂಚೆಯಿಂದಲೇ ಇಲ್ಲಿ ನೆಲೆಸಿದೆ. ಆದರೆ ನಾವು ಬಾಂಗ್ಲಾದೇಶೀಯರು ಎಂದು ಸುಳ್ಳು ಕೇಸ್ ಹಾಕಿಸಿ ಜೈಲಿಗೆ ಕಳುಹಿಸಲು ಪ್ರಯತ್ನಗಳು ನಡೆದಿವೆ ಎಂದು ಅರ್ಷದ್ ಆರೋಪಿಸಿದ್ದಾನೆ.
ಲಕ್ನೋ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ. ನಂತರ ಪ್ರಕರಣದ ತನಿಖೆಯ ದಿಕ್ಕನ್ನು ನಿರ್ಧರಿಸಲು ಪೊಲೀಸರು ಬಯಸಿದ್ದಾರೆ.