ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಸೋಮವಾರ ಅಥಣಿ ರಾಜಕೀಯ ಹಾಗೂ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿ ಸುದ್ದಿಯಾದರು.
ನಗರದ ಸರ್ಕಾರಿ ವಿಶ್ರಾಂತಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ಸಹಕಾರಿ ಕ್ಷೇತ್ರದ ಚುನಾವಣಾ ಸೋಲನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದರು.
ಸವದಿ ನೋವಿನ ಮೇಲೆ ಕೈ: 2028ರಲ್ಲಿ ಸೋಲು ಖಚಿತ
ಅಥಣಿ ಸಹಕಾರಿ ಚುನಾವಣೆಯಲ್ಲಿ, ನಾನು ಸವದಿ ಅವರ ನೋಯುತ್ತಿರುವ ಜಾಗದ ಮೇಲೆ ಕೈ ಹಾಕಿದ್ದೇನೆ. ಹೊಟ್ಟೆ ನೋವು ಬಂದಾಗ ಚಿಕ್ಕ ಮಗು ಅಳುವಂತೆ, ಸವದಿ ಅವರು ಹಾಗೆ ಆಗಿದ್ದಾರೆ. 2028 ರಲ್ಲಿ ಲಕ್ಷ್ಮಣ್ ಸವದಿ ಅವರನ್ನು ಸೋಲಿಸಿಯೇ ತೀರುತ್ತೇವೆ” ಎಂದು ಶಾಸಕ ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.
ಅಥಣಿ ತಾಲೂಕಿನ ಡಿಸಿಸಿ ಬ್ಯಾಂಕ್ ಮತ್ತು ಕೃಷ್ಣ ಸಹಕಾರಿ ಕಾರ್ಖಾನೆ ಚುನಾವಣೆಯಲ್ಲಿ ತಮ್ಮ ಗುಂಪು ಸೋಲುತ್ತದೆ ಎಂದು ಮೊದಲೇ ತಿಳಿದಿತ್ತು ಎಂದ ಜಾರಕಿಹೊಳಿ, ಕೃಷ್ಣ ಸಹಕಾರಿ ಕಾರ್ಖಾನೆ ಚುನಾವಣೆಯಲ್ಲಿ, ಸವದಿ ಅವರು 18 ಸಾವಿರ ಮತಗಳಲ್ಲಿ ಕೇವಲ ಐದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ತಮ್ಮ ಆಪ್ತ ಮಿತ್ರ ರಮೇಶ್ ಕತ್ತಿ ಅವರೊಂದಿಗೆ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದ ಜಾರಕಿಹೊಳಿ, ವಾಲ್ಮೀಕಿ ಸಮುದಾಯದ ಬಗ್ಗೆ ಕತ್ತಿ ನೀಡಿರುವ ಹೇಳಿಕೆಗಳನ್ನು ಅನುಚಿತ ಎಂದು ಖಂಡಿಸಿದರು. “ಅವರು ತಮ್ಮ ಭಾಷಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ಅವರು ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ‘ನವೆಂಬರ್ ಕ್ರಾಂತಿ’ ಚರ್ಚೆ: ನಮಗೆ ಮುಖ್ಯವಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ನಾಯಕತ್ವ ಬದಲಾವಣೆ ಚರ್ಚೆ ಬಗ್ಗೆ ಮಾತನಾಡಿದ ಜಾರಕಿಹೊಳಿ, “ಕಾಂಗ್ರೆಸ್‌ನಲ್ಲಿರುವ ನಮ್ಮದೇ ಜನರು ‘ನವೆಂಬರ್ ಕ್ರಾಂತಿ’ ಬಗ್ಗೆ ಏಕೆ ಚರ್ಚಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಅಥವಾ ಸಿದ್ದರಾಮಯ್ಯ ಅಧಿಕಾರದಲ್ಲಿ ಉಳಿಯಲಿ, ಅದು ನಮಗೆ ಮುಖ್ಯವಲ್ಲ. ನಾವು ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
ವಿಜಯೇಂದ್ರ ಆಡಳಿತದಿಂದ ಪಕ್ಷಕ್ಕೆ ಹಿನ್ನಡೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿದ ನಿರ್ಧಾರದ ಕುರಿತು ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯತ್ನಾಳ್ ಅವರನ್ನು ಹೊರಹಾಕಿ ಎಂಟು ತಿಂಗಳ ನಂತರ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ ಆದರೆ, ವಿಜಯೇಂದ್ರ ಹಿನ್ನಡೆ ಅನುಭವಿಸಿದ್ದಾರೆ ಎಂದರು.
ವಿಜಯೇಂದ್ರ ಮುಂದೆ ಬಂದರೆ ಮಾತ್ರ ಪ್ರತ್ಯೇಕ ಪಕ್ಷ ರಚನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿಗೆ ಯಾರೂ ಅನಿವಾರ್ಯರಲ್ಲ. ಆದರೆ ಯತ್ನಾಳ್ ದೊಡ್ಡ ಸಂಖ್ಯೆಯಲ್ಲಿ ನಿಂತಿದ್ದಾರೆ, ಬಿಜೆಪಿ ಅವರನ್ನು ಕಳೆದುಕೊಳ್ಳಬಾರದು” ಎಂದು ಸಲಹೆ ನೀಡಿದರು.
ಯಡಿಯೂರಪ್ಪ ಅವರ ವಿರುದ್ಧ ಎಂದಿಗೂ ಮಾತನಾಡಿಲ್ಲ ಎಂದ ಜಾರಕಿಹೊಳಿ, “ಆದರೆ ವಿಜಯೇಂದ್ರ ಅವರ ಆಡಳಿತದಿಂದಾಗಿ ಬಿಜೆಪಿ ಬಳಲುತ್ತಿರುವುದು ನಮಗೆ ನೋವಿನ ಸಂಗತಿ. ಮಾಧ್ಯಮಗಳ ಮುಂದೆ ಈ ವಿಷಯವನ್ನು ನಾವು ಚರ್ಚಿಸುವುದಿಲ್ಲ” ಎಂದು ಆಳವಾದ ಬೇಸರ ವ್ಯಕ್ತಪಡಿಸಿದರು.


