ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂನಲ್ಲಿ (ವೀರಭೂಮಿ) ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲಾಗುವುದ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯಕ್ಕೆ ಸೋಮವಾರ ಭೇಟಿ ನೀಡಿ, ಅಂತಿಮ ಹಂತದ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ನಂದಗಡ ಮ್ಯೂಸಿಯಂ ಸೇರಿ ಒಟ್ಟು 261 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 59 ಕೋಟಿ ವೆಚ್ಚದಲ್ಲಿ ಒಟ್ಟು 13 ಎಕರೆ ಜಾಗದಲ್ಲಿ ನಂದಗಡ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ.
ಕಾಂಪೌಂಡ್, ರಸ್ತೆ, ಕಲಾಕೃತಿಗಳು ಸೇರಿದಂತೆ ಅಗತ್ಯ ಕಾಮಗಾರಿಗಳು ಮುಕ್ತಾಯಗೊಂಡಿದೆ. ಸಿನಿಮಾ ಆ್ಯನಿಮೇಟರ್ ವಿದ್ಯುನ್ಮಾನ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಅವರ ಪೂರ್ಣ ಪ್ರಮಾಣದ ಪರಿಚಯಕ್ಕೆ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಮ್ಯೂಸಿಯಂನಲ್ಲಿ ಸಂಗೊಳ್ಳಿ ರಾಯಣ್ಣ ಅಧ್ಯಯನ ಕೇಂದ್ರ ಹಾಗೂ ರಾಯಣ್ಣನ ಕುರಿತು ಗ್ರಂಥಾಲಯ ಇರಲಿದೆ. ಪ್ರವಾಸಿಗರಿಗಾಗಿ ರೊಬೊಟ್ ಇರಿಸಲಾಗಿದ್ದು, ಸಂಗೊಳ್ಳಿರಾಯಣ್ಣನ ಇತಿಹಾಸ ತಿಳಿಸಿಕೊಡಲಿದೆ ಎಂದು ಮಾಹಿತಿ ನೀಡಿದರು.
ಇಂದಿನ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ನಂದಗಡದ ಕೆರೆಯಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗುವುದು. ಜನರಿಗೆ ಅನುಕೂಲವಾಗುವ ಪ್ರವೇಶ ದರ ನಿಗದಿ ಪಡಿಸಿ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಸಚಿವರು, ನಂದಗಡ ಮ್ಯೂಸಿಯಂ ವೀರಭೂಮಿ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಮುಖ್ಯ ದ್ವಾರ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ನಂತರ ಸಚಿವ ಶಿವರಾಜ್ ತಂಗಡಗಿ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳ ಮತ್ತು ರಾಯಣ್ಣ ಕೆರೆಯಲ್ಲಿ ಪ್ರತಿಮೆ ಸ್ಥಾಪನೆ ಕುರಿತು ಸ್ಥಳ ಪರಿಶೀಲನೆ ನಡೆಸಿದರಲ್ಲದೆ, ಕೆರೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಂಗೊಳ್ಳಿರಾಯಣ್ಣ ಪ್ರಾಧಿಕಾರದ ಸದಸ್ಯ ಕಾ.ತ.ಚಿಕ್ಕಣ್ಣ, ಪ್ರಾಧಿಕಾರದ ಆಯುಕ್ತರಾದ ಶಾಲಿನಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.