ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಕ್ಷೇತ್ರದಲ್ಲಿ ಎಗ್ಗಿಲ್ಲದೇ ಮರಳು ದಂಧೆ ಮುಂದುವರಿದಿದ್ದು, ಮಲಪ್ರಭಾ ನದಿಯನ್ನು ರಾಜಾರೋಷವಾಗಿ ಬಗೆದು ಮರಳು ತೆಗೆಯಲಾಗುತ್ತಿದೆ. ಮರಳು ಲೂಟಿ ಪ್ರಶ್ನಿಸಿದವರ ವಿರುದ್ಧ ಪ್ರಭಾವಿಗಳು ಬೆದರಿಕೆಯೊಡ್ಡುತ್ತಿರುವುದಾಗಿ ಕನ್ನಡ ಪರ ಹೋರಾಟಗಾರ ಮಹೇಶ್ ವಡ್ಡರ್ ಆರೋಪಿಸಿದ್ದಾರೆ.
ಪೊಲೀಸರ ಎದುರೇ ಮರಳು ಲೂಟಿಕೋರರು ಮತ್ತು ಹೋರಾಟಗಾರರ ನಡುವೆ ವಗ್ವಾದ.ಹಟಾಚಿ ಬಳಸಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದರೂ ಪೊಲೀಸರು ಪ್ರಶ್ನಿಸದೆ ಅಸಹಾಯಕರಾಗಿ ನಿಂತಿರುತ್ತಾರೆಂದು ವಡ್ಡರ್ ದೂರಿದ್ದಾರೆ.
ಬಾದಾಮಿಯ ಚೊಳಚಗುಡ್ಡ ಬಳಿ ಇರುವ ಮಲಪ್ರಭಾ ನದಿ ದಡದಲ್ಲಿ ಮರಳು ಲೂಟಿಕೋರರನ್ನು ಪ್ರಶ್ನಿಸಿದ್ದಕ್ಕೆ ಧರ್ಮಣ್ಣ ಪಾತ್ರೋಟಿ ಎಂಬಾತನ ಮೇಲೆ ಅಕ್ರಮ ಮರಳು ದಂಧೆಕೋರರು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಮರಳು ಲೂಟಿ ಪ್ರಶ್ನಿಸಿದ್ದಕ್ಕೆ ಶಾಸಕರ ಬೆಂಬಲಿಗರು ನನ್ನನ್ನ ಫಾಲೋ ಮಾಡ್ತಿದ್ದಾರೆ. ಒಂದು ವೇಳೆ ನನ್ನ ಜೀವಕ್ಕೆ ಏನಾದ್ರೂ ಅಪಾಯ ಆದರೆ ನೇರವಾಗಿ ಶಾಸಕರೇ ಕಾರಣ ಎಂದು ಮಹೇಶ್ ವಡ್ಡರ್ ವೀಡಿಯೊದಲ್ಲಿ ಹೇಳಿದ್ದಾರೆ.
ಗದಗ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ವ್ಯಾಪ್ತಿಯ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನದಿ ಒಡಲು ಬರಿದಾಗುತ್ತಿದೆ. ಸಿಸಿಟಿವಿ, ವೇಬ್ರಿಡ್ಜ್, ಕಾರ್ಮಿಕರಿಗೆ ಸುರಕ್ಷಾ ಸಾಧನಗಳು, ಮರಳು ಗಣಿಗಾರಿಕೆ ನಡೆಸುವ ಮಾಲೀಕರ ಹೆಸರು ಹಾಗೂ ಪರವಾನಗಿ ಇರುವ ಮಾಹಿತಿ ಫಲಕ ಸಹಿತ ಯಾವುದೇ ನಿಯಮಗಳನ್ನು ಪಾಲನೆ ಮಾಡದೆ ಅಕ್ರಮ ಮರಳು ಗಣಿಗಾರಿಕೆ ಇಲ್ಲಿ ನಡೆಯುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿ ಕಾರಿಗಳು ಈ ವಿಚಾರದಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ಹೊಳೆಆಲೂರ ಗ್ರಾಮದ ಮುಂಭಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನಿಖಾ ಠಾಣೆ ಇದೆ. ಆದರೆ ಅಲ್ಲಿ ಸಿಬ್ಬಂದಿಗಳಿಲ್ಲದ ಕಿಟಕಿ ಬಾಗಿಲುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.


