ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಕಾರ್ಣಿಕೋತ್ಸವ ಅದ್ಧೂರಿಯಾಗಿ ಬುಧವಾರ ನೆರವೇರಿದ್ದು, ಸಂಪಾಯಿತಲೇ ಪರಾಕ್ ಎಂದು ಗೊರವಯ್ಯ ಭವಿಷ್ಯ ನುಡಿ ದಿದ್ದು, ಭಕ್ತರು ಜಯಘೋಷ ಹಾಕಿದ್ದಾರೆ. ಕಷ್ಟಗಳೆಲ್ಲ ಕಳೆದು ಒಳ್ಳೆ ದಿನಗಳು ಬರುತ್ತದೆಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ಗೊರವಯ್ಯ ರಾಮಪ್ಪ 18 ಅಡಿ ಎತ್ತರದ ಬಿಲ್ಲೇರಿ ನುಡಿದ ದೈವವಾಣಿ ಅಲ್ಲಿ ಸೇರಿದ್ದ ಲಕ್ಷಾಂತರ ಭಕ್ತರಿಗೆ ನೆಮ್ಮದಿ, ಸಂತೋಷ ನೀಡಿದೆ. ‘ಸಂಪಾಯಿತಲೇ ಪರಾಕ್’ ಎಂದರೆ ಎಲ್ಲವೂ ಸಂಪೂರ್ಣವಾಯಿತು ಅಥವಾ ಸಮೃದ್ಧವಾಯಿತು ಎಂದು ಅರ್ಥೈಸಲಾಗುತ್ತದೆ. ನಾಡಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ, ರೈತರ ಬದುಕು ಹಸನಾಗಿ ಸುಖ ಶಾಂತಿ ನೆಲೆ ಸುತ್ತದೆ ಎಂಬುದಾಗಿ ಈ ಮಾತನ್ನು ವಿಶ್ಲೇಷಿಸಲಾಗುತ್ತದೆ.
ಪ್ರತಿ ವರ್ಷ ಕಾರ್ಣಿಕ ವಾಣಿ ಆದ ತಕ್ಷಣ ಧರ್ಮದರ್ಶಿಗಳಾದ ವೆಂಕಪ್ಪಯ್ಯ ಒಡೆಯರ್ ಅರ್ಥವನ್ನು ಬಿಡಿಸಿ ಹೇಳುತ್ತಿದ್ದರು. ರಾಜಕೀಯದಲ್ಲಿ ಏನಾಗುತ್ತದೆ, ಮಳೆ, ಬೆಳೆ ಹೇಗಾಗುತ್ತದೆ ಎಂದು ವಿಶ್ಲೇ ಷಣೆ ಮಾಡುತ್ತಿದ್ದರು, ಆದರೆ ಈ ಬಾರಿ ವಿಜಯನಗರ ಜಿಲ್ಲಾಡಳಿತ ಇದಕ್ಕೆ ತಡೆ ನೀಡಿದೆ. ಕಾರ್ಣಿಕವನ್ನ ಧರ್ಮದರ್ಶಿಗಳು ಅಥವಾ ಯಾರೂ ಅಧಿಕೃತವಾಗಿ ವಿಶ್ಲೇಷಣೆ ಮಾಡುವ ಹಾಗಿಲ್ಲ, ಅದು ಅವರವರ ಭಕ್ತಿಗೆ ಬಿಟ್ಟಿದ್ದು ಎಂದು ಡಿಸಿ ತಿಳಿಸಿದ್ದಾರೆ.


