ಪಾಕಿಸ್ತಾನದ ಧ್ವಜ ಮಾರಾಟ ಮಾಡಿದ್ದಕ್ಕಾಗಿ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಪಾಕಿಸ್ತಾನ ಧ್ವಜ ಸೇರಿದಂತೆ ಆ ದೇಶದ ಇತರ ವಸ್ತುಗಳ ಮಾರಾಟವನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಹಾಗೂ ಆ ವಸ್ತುಗಳನ್ನು ತೆಗೆದುಹಾಕಬೇಕು ಎಂದು ಗ್ರಾಹಕರ ಕ್ಷೇಮಾಭಿವೃದ್ಧಿ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಅಮೆಜಾನ್, ಫ್ಲಿಪ್ ಕಾರ್ಟ್, ಯುಬೈ ಇಂಡಿಯಾ, ಇಟ್ಸೆ, ದಿ ಫ್ಲಾಗ್ ಕಂಪನಿ, ದಿ ಫ್ಲಾಗ್ ಕಾರ್ಪೊರೇಷನ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ಪಾಕಿಸ್ತಾನ ಧ್ವಜ ಹಾಗೂ ಆ ದೇಶದ ವಸ್ತುಗಳ ಮಾರಾಟ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ನೋಟಿಸ್ ಬಗ್ಗೆ ಅಮೆಜಾನ್, ಫ್ಲಿಪ್ ಕಾರ್ಟ್ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನ ಧ್ವಜ ಅಥವಾ ಚಿಹ್ನೆ ಬಳಸಿರುವ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ತಕ್ಷಣವೆ ಈ ಉತ್ಪನ್ನ ಪಟ್ಟಿಗಳನ್ನು ತೆಗೆದುಹಾಕಲು ಆದೇಶಿಸಲಾಗಿದೆ. ಈ ಮಾರಾಟವು ಸೂಕ್ಷ್ಮತೆಯಿಲ್ಲದ್ದು ಮತ್ತು ರಾಷ್ಟ್ರೀಯ ಭಾವನೆಗಳನ್ನು ಉಲ್ಲಂಘಿಸುತ್ತದೆ. ಇಂತಹ ಸೂಕ್ಷ್ಮತೆಯ ಕೊರತೆಯನ್ನು ಸಹಿಸಲಾಗುವುದಿಲ್ಲ” ಎಂದು ಸಚಿವ ಜೋಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಾ ಆನ್‌ಲೈನ್ ಮಾರಾಟಗಾರರು ವ್ಯಾಪಾರ ಮಾಡುವಾಗ ಭಾರತೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ.