Menu

ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರಿಗೆ ವೇತನ ಹೆಚ್ಚಳ ಪ್ರಸ್ತಾವ

2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಾರಿಗೆ ನೌಕರ ಸಂಘಟನೆಗಳ ಮುಂದಿಟ್ಟಿದ್ದಾರೆ. ಈ ಕುರಿತು ಚರ್ಚಿಸಲು ಏ.17ರಂದು ಸಭೆ ನಡೆಯಲಿದೆ.

ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ಆದೇಶ ಜಾರಿಗೆ ಸಂಬಂಧಿಸಿ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ನೇತೃತ್ವದಲ್ಲಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರೊಂದಿಗೆ ಸಭೆ ನಡೆದಿದೆ.
2021ರ ಜ.1ರಿಂದ 2023ರ ಫೆ. 28ರವರೆಗೆ ಒಟ್ಟು 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2025ರ ಏ.1ರಿಂದ ಜಾರಿಗೆ ಬರುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡುವ ಕುರಿತು ಚರ್ಚಿಸಲಾಗಿದೆ.
26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಸಂಬಂಧಿಸಿ ಸರ್ಕಾರ ಘೋಷಿಸಿರುವ 1271.92 ಕೋಟಿ ರೂ. ಶೀಘ್ರ ನಿಗಮಗಳಿಗೆ ಬಿಡುಗಡೆ ಮಾಡಲಾಗುತ್ತದೆ, ಹಣ ಬಿಡುಗಡೆಯಾದ ಕೂಡಲೇ ವೇತನ ಹೆಚ್ಚಳ ಹಿಂಬಾಕಿ ಪಾವತಿಸುವುದಾಗಿ ಅಕ್ರಂ ಪಾಷಾ ತಿಳಿಸಿದರು.
2021ರ ಜ.1ರಿಂದ 2023ರ ಫೆ. 28ರವರೆಗಿನ ವೇತನ ಹೆಚ್ಚಳ ಹಿಂಬಾಕಿ ಜತೆಗೆ 2020ರ ಜ. 1ರಿಂದ ಡಿ. 31ರವರೆಗಿನ 12 ತಿಂಗಳ ವೇತನ ಹೆಚ್ಚಳ ಹಿಂಬಾಕಿಯನ್ನೂ ಪಾವತಿಸಲು ಕ್ರಮ ಕೈಗೊಳ್ಳಬೇಕು.ಹೊಸ ವೇತನ ಹೆಚ್ಚಳದ ಪ್ರಮಾಣವನ್ನು ಸಭೆಯಲ್ಲಿ ಪ್ರಕಟಿಸಬೇಕು ಎಂದು ಸಾರಿಗೆ ನೌಕರ ಸಂಘಟನೆಯ ಪ್ರಮುಖರು ಆಗ್ರಹಿಸಿದರು. 2025ರ ಆ.5ರಂದು ನಡೆದ ಮುಷ್ಕರದ ಸಂದರ್ಭದಲ್ಲಿ ನಿಯಮ 23ರ ಅಡಿ ನೌಕರರ ಮೇಲಿನ ಶಿಸ್ತು ಕ್ರಮ ಕೂಡಲೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಉಳಿದ ಮೂರು ನಿಗಮಗಳ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಅದಕ್ಕೆ ಅಕ್ರಂ ಪಾಷಾ ಮುಂದಿಟ್ಟರು. ನಿಯಮ 23ರ ಅಡಿ ತೆಗೆದುಕೊಳ್ಳಲಾಗಿರುವ ಶಿಸ್ತು ಕ್ರಮವನ್ನು ನಿಯಮ 22ಕ್ಕೆ ಪರಿವರ್ತಿಸಿ ನೌಕರರಿಗೆ ಅಂತರ ನಿಗಮ ವರ್ಗಾವಣೆ, ಬಡ್ತಿ ಸೇರಿ ಇನ್ನಿತರ ಸೌಲಭ್ಯಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ ಏರಿಕೆಯಾಗುವುದಿಲ್ಲ. ಇನ್ನು ಆಟೋ ಗ್ಯಾಸ್‌ ಸೇರಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಸರಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಯುದ್ಧ ತಾತ್ಕಾಲಿಕವಾಗಿದ್ದು, ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *