Menu

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ: ಏ.7 ರಿಂದ ಸುಪ್ರೀಂ ವಿಚಾರಣೆ

shabarimale temple

ಶಬರಿಮಲೆ ದೇಗುಲ ಸೇರಿದಂತೆ ದೇಶಾದ್ಯಂತ ಹಲವು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಏ.7 ರಿಂದ ವಿಚಾರಣೆ ನಡೆಯಲಿದೆ. ಒಂಬತ್ತು ಸದಸ್ಯರ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಸುಪ್ರೀಂಕೋರ್ಟ್ ಏ.22ಗೊಳಗೆ ವಿಚಾರಣೆ ಪೂರ್ಣಗೊಳಿಸುವ ಗಡುವು ವಿಧಿಸಿಕೊಂಡಿದೆ.

ಏಪ್ರಿಲ್ 7 ರಂದು ಬೆಳಿಗ್ಗೆ 10.30 ಕ್ಕೆ ವಿಚಾರಣೆ ಆರಂಭವಾಗಲಿದೆ ಎಂದು ಕೋರ್ಟ್‌ ತಿಳಿಸಿದೆ. ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ವಿಚಾರಣೆ ನಡೆಸಲಾಗುವುದು ಮತ್ತು ವಿರೋಧಿಸುವ ಅರ್ಜಿಗಳನ್ನು ಏಪ್ರಿಲ್ 14- 16 ರವರೆಗೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಪ್ರತ್ಯಾರೋಪ ಇದ್ದರೆ ಏಪ್ರಿಲ್ 21 ರಂದು ವಿಚಾರಣೆಗೆ ಬರಲಿವೆ ಮತ್ತು ನಂತರ ಸಲ್ಲಿಕೆಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ಎಲ್ಲಾ ವಕೀಲರು ವೇಳಾಪಟ್ಟಿಯನ್ನು ಪಾಲಿಸುವಂತೆ ಪೀಠ ಸೂಚನೆ ನೀಡಿದೆ ಮತ್ತು ಮಾರ್ಚ್ 14 ರಂದು ಅಥವಾ ಅದಕ್ಕೂ ಮೊದಲು ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ತಿಳಿಸಿದೆ.

ಸೆಪ್ಟೆಂಬರ್ 2018 ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅನುಮತಿಸಿತ್ತು. ಪೀಠದ ಏಕೈಕ ಮಹಿಳಾ ನ್ಯಾಯಾಧೀಶರಾದ ನ್ಯಾಯಮೂರ್ತಿ ಇಂದು ಮಲ್ಹೋತ್ರಾ , “ಭಕ್ತಿಯನ್ನು ಲಿಂಗ ತಾರತಮ್ಯಕ್ಕೆ ಒಳಪಡಿಸಲಾಗುವುದಿಲ್ಲ” ಎಂದು ಹೇಳಿದ್ದರು.

ಕೇಂದ್ರ ಸರ್ಕಾರದ ಪರವಾಗಿಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆಗಾಗಿ ಅರ್ಜಿ ಬೆಂಬಲಿಸುವುದಾಗಿ ಹೇಳಿದರು. ಪೀಠದಿಂದ ನೇಮಕಗೊಂಡ ವಕೀಲ ಕೃಷ್ಣ ಕುಮಾರ್ ಸಿಂಗ್ ಅವರನ್ನು ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆ ಬೆಂಬಲಿಸುವ ಪಕ್ಷಗಳ ನೋಡಲ್ ವಕೀಲರನ್ನಾಗಿ ಘೋಷಿಸಲಾಗಿದೆ. ಪುನರ್ ಪರಿಶೀಲನೆಯನ್ನು ವಿರೋಧಿಸುವ ಪಕ್ಷಗಳ ನೋಡಲ್ ವಕೀಲರಾಗಿ ಶಾಶ್ವತಿ ಪರಿ ಅವರನ್ನು ನೇಮಕ ಮಾಡಲಾಗಿದೆ.

ಈ ಅರ್ಜಿಗಳನ್ನು ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ, ಪಾರ್ಸಿ ಅಲ್ಲದ ವ್ಯಕ್ತಿಯನ್ನು ವಿವಾಹವಾಗಿದ್ದರೆ ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ ಹಾಗೂ ದಾವೂದಿ ಬೊಹ್ರಾ ಸಮುದಾಯದಲ್ಲಿ ಸ್ತ್ರೀ ಜನನಾಂಗ ಛೇದನದ ಪದ್ಧತಿಯ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳ ಜೊತೆಗೆ ಇದನ್ನೂ ಪಟ್ಟಿ ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *